ಜಿಲ್ಲೆಯಲ್ಲಿ ವಿದ್ಯುತ್ ಪರಿವರ್ತಕಗಳ ಸರಣಿ ಕಳವು

ವಿದ್ಯುತ್ ಪರಿವರ್ತಕಗಳ ಸರಣಿ ಕಳವು
ವಿದ್ಯುತ್ ಪರಿವರ್ತಕಗಳ ಸರಣಿ ಕಳವು
Published on

ವಿಜಯವಾಣಿ ಸುದ್ದಿಜಾಲ ಬೆಂ.ಗ್ರಾಮಾಂತರ/ಕುಂದಾಣ
ಕುರಿ, ಕೋಳಿ, ರಾಸುಗಳನ್ನು ಕದ್ದೊಯ್ದು ರೈತಾಪಿ ಜನರಲ್ಲಿ ಕಣ್ಣೀರು ತರಿಸುವ ಖದೀಮರು, ಇದೀಗ ರೈತರ ಜಮೀನುಗಳಲ್ಲಿನ ವಿದ್ಯುತ್ ಪರಿವರ್ತಕ (ಟಾನ್‌ಸ್ಾರ್ಮರ್)ಗಳ ಮೇಲೆ ಕಣ್ಣು ನೆಟ್ಟಿದ್ದಾರೆ. ಸಾಕು ಪ್ರಾಣಿಗಳ ರಕ್ಷಣೆಗೆ ಪರದಾಡುತ್ತಿರುವ ರೈತರಿಗೆ ಕಳ್ಳರ ಈ ಕೃತ್ಯ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಕಾವಲು ಕಾಯಬೇಕಿದೆ: ಕಾಡುಪ್ರಾಣಿಗಳಿಂದ ಬೆಳೆ ರಕ್ಷಣೆಗೆ ಪರದಾಡುವ ರೈತರು ಇದೀಗ ಜಮೀನುಗಳಲ್ಲಿನ ಟಾನ್‌ಸ್ಾರ್ಮರ್‌ಗಳ ರಕ್ಷಣೆಗೆ ಪರದಾಡುವಂತಾಗಿದೆ. ರಾತ್ರಿವೇಳೆ ಕೃತ್ಯ ಎಸಗುವ ಕಳ್ಳರ ಕೈಚಳಕ ರೈತಾಪಿ ಜನರ ನಿದ್ರೆಗೆಡಿಸಿದೆ. ಮೊದಲೇ ಕರೆಂಟ್ ಕಣ್ಣಾಮುಚ್ಚಾಲೆಯಿಂದ ಹೈರಾಣಾಗಿರುವ ರೈತರಿಗೆ ವಿದ್ಯುತ್ ಪರಿವರ್ತಕಗಳ ಕಳವು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ.

ಕಳ್ಳರ ಸೆರೆಗೆ ಖಾಕಿ ನಿರಾಸಕ್ತಿ
ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ದೇವಸ್ಥಾನಗಳಲ್ಲಿ ಕಾಣಿಕೆ ಹುಂಡಿ ಕಳವು ಅವ್ಯಾಹತವಾಗಿದೆ. ಅದೇ ರೀತಿ ಹಂದಿ, ಕುರಿ, ಮೇಕೆಗಳ ಕಳವು ಪ್ರಕರಣಗಳು ನಡೆಯುತ್ತಲೇ ಇವೆ. ಆದರೆ ಕಳ್ಳರ ಬಂಧನ ಬೆರಳೆಣಿಕೆಯಷ್ಟಿದೆ. ಇಂಥ ಪ್ರಕರಣಗಳನ್ನು ಪೊಲೀಸರು ಗಂಭೀರವಾಗಿ ಪರಿಗಣಿಸದಿರುವುದು ಕಳ್ಳರಿಗೆ ವರದಾನವಾಗಿದೆ. ಹೇಗಿದ್ದರೂ ಪೊಲೀಸರು ಬೆನ್ನು ಬೀಳುವುದಿಲ್ಲ ಎಂಬ ಧೈರ್ಯದಲ್ಲಿ ಕಳ್ಳತನ ಮುಂದುವರಿಸಿರುವ ಖದೀಮರು ಇದೀಗ ವಿದ್ಯುತ್ ಪರಿವರ್ತಕಗಳ ಕಳವಿಗೆ ಮುಂದಾಗಿದ್ದಾರೆ. ಜಿಲ್ಲೆಯಲ್ಲಿ ಹಲವು ಕಡೆಗಳಲ್ಲಿ ಇಂತಹ ಪ್ರಕರಣಗಳು ನಡೆದಿವೆ. ಠಾಣೆಗಳಲ್ಲಿ ದೂರು ದಾಖಲಾಗಿದೆ. ಆದರೆ ಇದುವರೆಗೆ ಟ್ರಾನ್‌ಸ್ಾರ್ಮರ್ ಕಳ್ಳರು ಖಾಕಿ ಬಲೆಗೆ ಬಿದ್ದಿಲ್ಲ.

ದೇವನಹಳ್ಳಿಯಲ್ಲಿ ಹೆಚ್ಚು ಕಳವು

ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಇತ್ತೀಚಿನ ದಿನಗಳಲ್ಲಿ ಕಳ್ಳರ ಕೈಚಳಕ ಹೆಚ್ಚಿದೆ, ವಿದ್ಯುತ್ ಸರಬರಾಜು ಮಾಡುವ ವಿದ್ಯುತ್ ಪರಿವರ್ತಕಗಳೆ ಕಳ್ಳರ ಟಾರ್ಗೆಟ್ ಆಗಿದೆ. ಟ್ರಾನ್‌ಸ್ಾರ್ಮರ್‌ಗಳಲ್ಲಿನ ತಾಮ್ರಕ್ಕಾಗಿ ಈ ಕೃತ್ಯ ಎಸಗಲಾಗುತ್ತಿದೆ. ಒಂದೊಂದು ವಿದ್ಯುತ್ ಪರಿವರ್ತಕದಲ್ಲೂ ಸುಮಾರು 25 ಕೆಜಿಯಷ್ಟು ತಾಮ್ರವಿರುತ್ತದೆ ಎನ್ನಲಾಗಿದ್ದು, ತಾಮ್ರ ಎಗರಿಸಲು ಟ್ರಾನ್‌ಸ್ಾರ್ಮರ್‌ಗಳಿಗೆ ಕನ್ನಹಾಕುತ್ತಿದ್ದಾರೆ. ಅದರಲ್ಲಿರುವ ತಾಮ್ರ ಮುಂತಾದ ವಸ್ತುಗಳನ್ನು ಕದ್ದು ಮೇಲ್ಪದರದ ಕವಚವನ್ನು ಸ್ಥಳದಲ್ಲೇ ಬಿಟ್ಟು ಹೋಗುವ ಪ್ರಕರಣಗಳು ಸಾಕಷ್ಟು ನಡೆದಿವೆ. ಜಮೀನುಗಳಲ್ಲಿ ಒಂದು ಟ್ರಾನ್‌ಸ್ಾರ್ಮರ್ ಹಾಕಿಸಿಕೊಳ್ಳಲು 60 ಸಾವಿರ ರೂಪಾಯಿಯಿಂದ ಲಕ್ಷಾಂತರ ರೂ.ಖರ್ಚು ಬರುತ್ತದೆ. ಹೀಗೆ ಏಕಾಏಕಿ ಕಳುವಾದರೆ ಮತ್ತೆ ಹೊಸದಾಗಿ ಸಂಪರ್ಕ ಪಡೆಯಲು ಇನ್ನಿಲ್ಲದ ನಿಯಮ ಪಾಲಿಸಬೇಕು, ತಿಂಗಳುಗಟ್ಟಲೆ ಕಾಯಬೇಕು ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.


ವಿದ್ಯುತ್ ಪರಿವರ್ತಕಗಳ ಕಳವು ಪ್ರಕರಣ ಕುರಿತು ಆಯಾ ವ್ಯಾಪ್ತಿಯ ಠಾಣೆಗಳಲ್ಲಿ ದೂರು ದಾಖಲಾಗಿದ್ದರೆ ಅವುಗಳನ್ನು ಪರಿಶೀಲಿಸಲಾಗುವುದು. ಕೂಡಲೇ ಕಳ್ಳರ ಬಂಧನಕ್ಕೆ ಕಾರ್ಯಾಚರಣೆ ರೂಪಿಸುವಂತೆ ಸಂಬಂಧಪಟ್ಟ ಠಾಣಾಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಸಾರ್ವಜನಿಕರಿಗೆ ಪ್ರಕರಣ ಸಂಬಂಧ ಸುಳಿವಿದ್ದರೆ ಮಾಹಿತಿ ನೀಡಿ ಪೊಲೀಸರಿಗೆ ಸಹಕರಿಸಬೇಕು. ಈ ಮೂಲಕ ಇಂಥ ಕೃತ್ಯಗಳಿಗೆ ಕಡಿವಾಣ ಹಾಕಬಹುದು.

ಮಲ್ಲಿಕಾರ್ಜುನ ಬಾಲದಂಡಿ, ಎಸ್‌ಪಿ ಬೆಂ.ಗ್ರಾಮಾಂತರ

ದೇವನಹಳ್ಳಿಯ ತಿಂಡ್ಲು ಭಾಗದಲ್ಲಿ ಟ್ರಾನ್‌ಸ್ಾರ್ಮರ್‌ನಲ್ಲಿ ತಾಮ್ರ ಕದ್ದಿರುವ ಪ್ರಕರಣ ನಮ್ಮ ಸಿಬ್ಬಂದಿಯಿಂದ ತಿಳಿದುಬಂದಿದೆ. ಈ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು, ಇಂಥದ್ದೇ ಪ್ರಕರಣಗಳು ಕುಂದಾಣ, ವಿಶ್ವನಾಥಪುರ, ಆವತಿ, ಉಗನವಾಡಿಗಳಲ್ಲೂ ನಡೆದಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಮಾನಸಾ, ಎಇ ಬೆಸ್ಕಾಂ ಇಲಾಖೆ ದೇವನಹಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net