

ನೆಲಮಂಗಲ: ಚಂಡಮಾರುತದ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆ ಮಳೆಯಾಗುತ್ತಿದ್ದು, ಬೆಂಗಳೂರಿನಲ್ಲಿ ಮಳೆ ಸುರಿಯಲಾರಂಭಿಸಿದೆ. ಮಳೆ ಅವಾಂತರದ ಜತೆಗೆ ಅಪಘಾತಗಳೂ ಉಂಟಾಗುತ್ತಿವೆ. ಇದೀಗ ಸರಣಿ ಅಪಘಾತವೊಂದು ಸಂಭವಿಸಿದೆ.
ಬೆಂಗಳೂರಿನ ಪೀಣ್ಯ ಫ್ಲೈ ಓವರ್ ಮೇಲೆ ಈ ಸರಣಿ ಅಪಘಾತ ಸಂಭವಿಸಿದ್ದು, ಒಂದರ ಹಿಂದೊಂದರಂತೆ ಕಾರುಗಳು ಡಿಕ್ಕಿಯಾದ್ದರಿಂದ ಒಟ್ಟು 9 ಕಾರುಗಳು ಜಖಂಗೊಂಡಿವೆ. ಮಾತ್ರವಲ್ಲ, ಕಾರೊಂದರಲ್ಲಿದ್ದ ವೃದ್ಧೆಯೊಬ್ಬರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಎಂಟನೇ ಮೈಲಿಯ ನಾಗಸಂದ್ರ ಬಳಿ ಈ ಸರಣಿ ಅಪಘಾತ ಸಂಭವಿಸಿದೆ. ಅಪಘಾತದಿಂದಾಗಿ ಮೇಲ್ಸೇತುವೆ ಮೇಲೆ ಕೆಲಕಾಲ ಸಂಚಾರದಟ್ಟಣೆ ಉಂಟಾಗಿತ್ತು. ಪೀಣ್ಯ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ಸಂಭವಿಸಿದೆ.