ಸ್ವಾವಲಂಬಿ ಬದುಕು ಕಟ್ಟಿಕೊಡಲಿದೆ ರೇಷ್ಮೆ ಕೃಷಿ

RESHME
Published on

ಮೈಸೂರು: ರೇಷ್ಮೆ ಕೃಷಿ ರೈತರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದೆ ಎಂದು ರೇಷ್ಮೆ ಇಲಾಖೆ ನಿವೃತ್ತ ವಿಜ್ಞಾನಿ ಡಾ.ಜಿ.ಗೀತಾ ದೇವಿ ಅಭಿಪ್ರಾಯಪಟ್ಟರು.


ನಗರದ ಮಾನಂದವಾಡಿ ರಸ್ತೆಯಲ್ಲಿರುವ ಕೇಂದ್ರೀಯ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯಲ್ಲಿ ಬುಧವಾರ ಆಯೋಜಿದ್ದ ಕೇಂದ್ರ ರೇಷ್ಮೆ ಮಂಡಳಿಯ ಬೆಳ್ಳಿ ಮಹೋತ್ಸವ ಹಾಗೂ ರೇಷ್ಮೆ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇಂದು ರೇಷ್ಮೆ ಉದ್ಯಮ ಜಗತ್ತಿನ ಗಮನ ಸೆಳೆದಿದೆ. ಭಾರತದ ಮಲ್ಬರಿ ರೇಷ್ಮೆ ಪ್ರಪಂಚದಾದ್ಯಂತ ಸಾಕಷ್ಟು ಬೇಡಿಕೆ ಪಡೆದುಕೊಂಡಿದೆ ಎಂದು ಹೇಳಿದರು.
ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶದಲ್ಲಿ ರೇಷ್ಮೆ ಬೆಳೆಯನ್ನು ಹೆಚ್ಚಾಗಿ ಬೆಳೆಯಲಾಗುತ್ತಿದ್ದು, ಪ್ರಪಂಚದ ಹಲವಾರು ದೇಶಗಳಿಗೆ ಈ ರಾಜ್ಯಗಳು ರೇಷ್ಮೆ ಮಾರುಕಟ್ಟೆ ಒದಗಿಸಿಕೊಟ್ಟಿವೆ. ರೇಷ್ಮೆ ಬೆಳೆ ಆರಂಭಿಕ ದಿನಗಳಲ್ಲಿ ಕೆ.ಜಿ. ರೇಷ್ಮೆ ಕೇವಲ 50 ರೂ. ಇತ್ತು. ಆದರೆ, ಇಂದು 500 ರಿಂದ 1000 ರೂ. ಆಸುಪಾಸಿನಲ್ಲಿದೆ. ಇದು ಕೆಲವೊಮ್ಮೆ 2 ರಿಂದ 3 ಸಾವಿರ ರೂ. ತಲುಪಿದ ಉದಾಹರಣೆಗಳಿವೆ. ರೈತರಿಗೆ ಹೆಚ್ಚು ಲಾಭ ತಂದುಕೊಡುವ ಬೆಳೆಗಳಲ್ಲಿ ರೇಷ್ಮೆ ಬೆಳೆಯೂ ಒಂದು. ಎಲ್ಲೋ ಅಪರೂಪಕ್ಕೆ ಒಮ್ಮೆ ಬೆಲೆ ಕುಸಿತವಾಗುವುದನ್ನು ಬಿಟ್ಟರೆ ಯಾವಾಗಲೂ ಉತ್ತಮ ಆದಾಯ ತಂದುಕೊಡುವ ಬೆಳೆಯಾಗಿದೆ ಎಂದರು.

ಆಧುನಿಕ ತಂತ್ರಜ್ಞಾನ ಬಳಸಿಕೊಂಡು ರೇಷ್ಮೆಯನ್ನು ಹೆಚ್ಚಾಗಿ ಬೆಳೆಯುವ ಅವಕಾಶಗಳಿವೆ. ಈ ಬೆಳೆಗೆ ರೋಗ ತಗುಲುವುದೂ ತೀರ ಅಪರೂಪ. ಬೆಳೆಗೆ ಆರಂಭಿಕ ದಿನಗಳಲ್ಲೇ ರೋಗ ತಗುಲದಂತೆ ರೈತರು ಎಚ್ಚರ ವಹಿಸಿದರೆ ಉತ್ತಮ ಫಲ ನಿರೀಕ್ಷೆ ಮಾಡಬಹುದು. ಇಂತಹ ಬೆಳೆಗಳನ್ನು ಹೆಚ್ಚಾಗಿ ಬೆಳೆಯುವುದರಿಂದ ರೈತರು ಯಾರ ಬಳಿಯೂ ಸಹಾಯಕ್ಕೆ ಕೈ ಚಾಚದೆ ನೆಮ್ಮದಿಯ ಬದುಕು ಕಟ್ಟಿಕೊಳ್ಳಬಹುದು. ಅಲ್ಲದೇ ಐಟಿ ಕ್ಷೇತ್ರಗಳಂತೆ ದಿನಕ್ಕೆ 15 ಗಂಟೆಗಳ ಕಾಲವೂ ದುಡಿಯುವ ಅವಶ್ಯಕತೆ ಇಲ್ಲ ಎಂದು ಹೇಳಿದರು.

ರೇಷ್ಮೆ ತರಬೇತಿ ಕೇಂದ್ರಗಳು ಕಾಲಕಾಲಕ್ಕೆ ರೈತರಿಗೆ ಮತ್ತು ವಿದ್ಯಾರ್ಥಿಗಳಿಗೆ ರೇಷ್ಮೆ ಬೆಳೆಯ ಬಗ್ಗೆ ಕಾರ್ಯಾಗಾರ ಆಯೋಜಿಸಿ, ಬೆಳೆಯ ಮಹತ್ವ, ಬೆಳೆ ಬೆಳೆಯುವ ವಿಧಾನ ಹಾಗೂ ಅದಕ್ಕೆ ಲಭ್ಯವಿರುವ ಮಾರುಕಟ್ಟೆಯ ಬಗ್ಗೆ ಅರಿವು ಮೂಡಿಸುವ ಇಂತಹ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಇದೇ ವೇಳೆ ಸಂಸ್ಥೆ ಹೊರತಂದಿರುವ ‘ರೇಷ್ಮೆ ಕಿರಣ’ಎಂಬ ವಾರ್ಷಿಕ ಸಂಚಿಕೆ ಬಿಡುಗಡೆಗೊಳಿಸಲಾಯಿತು. ಸಂಸ್ಥೆಯ ನಿರ್ದೇಶಕ ಡಾ.ಎಸ್.ಗಾಂಧಿ ದಾಸ್, ಸಂಸ್ಥೆಯ ವಿಜ್ಞಾನಿಗಳಾದ ಡಾ.ಕೆ.ಬಿ.ಚಂದ್ರಶೇಖರ್, ಡಾ.ಆರ್.ಭಾಗ್ಯ, ಡಾ.ಎಂ.ಮುತ್ತುಲಕ್ಷ್ಮೀ ಹಾಗೂ ಸಂಸ್ಥೆಯ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net