ರೇಷ್ಮೆ ಕೃಷಿಯಲ್ಲಿ ಉತ್ತಮ ಭವಿಷ್ಯ: ಜಿಲ್ಲಾಧಿಕಾರಿ ಡಾ.ಕುಮಾರ ಅಭಿಮತ

Sericulture Growers Technical Conference Mandya
Published on

ಮಂಡ್ಯ: ರೇಷ್ಮೆ ವಾಣಿಜ್ಯ ಬೆಳೆಯಾಗಿರುವುದರಿಂದ ರೈತರು ಹೆಚ್ಚಿನ ಲಾಭ ಗಳಿಸಬಹುದು. ಆದ್ದರಿಂದ ಸಾಂಪ್ರದಾಯಿಕ ಬೆಳೆ ಜತೆಗೆ ರೇಷ್ಮೆ ಕೃಷಿ ಕಡೆಗೂ ಗಮನಹರಿಸಬೇಕು. ರೇಷ್ಮೆ ಉತ್ಪಾದನೆಯಲ್ಲಿ ಉತ್ತಮ ಭವಿಷ್ಯವಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸಲಹೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ರೇಷ್ಮೆ ಇಲಾಖೆಯಿಂದ ಆಯೋಜಿಸಿದ್ದ ಜಿಲ್ಲೆಯ ರೇಷ್ಮೆ ಬೆಳೆಗಾರರ ತಾಂತ್ರಿಕ ಸಮಾವೇಶ ಉದ್ಘಾಟಿಸಿ ಮಾತನಾಡಿ ಅವರು, ಜಿಲ್ಲೆಯಲ್ಲಿ ರೇಷ್ಮೆ ಬೆಳೆಯನ್ನು ಹೆಚ್ಚು ಬೆಳೆಯಬೇಕು ಹಾಗೂ ಆರ್ಥಿಕವಾಗಿ ಸದೃಢರಾಗಬೇಕು ಎಂಬ ಉದ್ದೇಶದಿಂದ ರೇಷ್ಮೆ ಇಲಾಖೆ ಕಾರ್ಯನಿರ್ವಹಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರೈತರು ಆರ್ಥಿಕವಾಗಿ ಸದೃಢರಾಗುವ ನಿಟ್ಟಿನಲ್ಲಿ ಹೊಸ ತಾಂತ್ರಿಕತೆಗಳ ವಿವರ ನೀಡಿ. ಈ ಮೂಲಕ ಆತ್ಮವಿಶ್ವಾಸ ತುಂಬಬೇಕು. ಸೈನಿಕರು ದೇಶದ ಹೊರಗೆ ಶ್ರಮಿಸಿದರೆ, ರೈತರು ದೇಶದ ಒಳಗೆ ಆಹಾರ ಒದಗಿಸಲು ಶ್ರಮಿಸುತ್ತಾರೆ. ರೈತರು ಹಾಗೂ ಸೈನಿಕರು ಹೃದಯವಂತಿಕೆಯಲ್ಲಿ ಶ್ರೀಮಂತರು. ಜಿಲ್ಲೆಯಲ್ಲಿ ಭತ್ತ ಮತ್ತು ಕಬ್ಬಿನ ಜತೆಗೆ ಇತರೆ ಪರ್ಯಾಯ ಬೆಳೆಗಳನ್ನು ಬೆಳೆಯಬೇಕು. ಒಂದೇ ರೀತಿಯ ಬೆಳೆಯನ್ನು ಬೆಳೆದಷ್ಟು ಮಣ್ಣಿನ ಫಲವತ್ತತೆ ಕಡಿಮೆಯಾಗುವ ಸಾಧ್ಯತೆ ಹೆಚ್ಚು. ಹಾಗಾಗಿ ಇತರೆ ಬೆಳೆಗಳನ್ನು ಸಹ ಪ್ರೋತ್ಸಾಹಿಸಿ ಎಂದು ಕಿವಿಮಾತು ಹೇಳಿದರು.

ರೇಷ್ಮೆ ಕೃಷಿ ಅಭಿವೃದ್ಧಿ ಆಯುಕ್ತ ಎಂ.ಬಿ.ರಾಜೇಶ್‌ಗೌಡ ಮಾತನಾಡಿ, ರಾಜ್ಯದಲ್ಲಿಯೇ ಹೆಚ್ಚು ಕೃಷಿಕರನ್ನು ಹೊಂದಿರುವ ಜಿಲ್ಲೆ ಮಂಡ್ಯ. ಇಲ್ಲಿನ ರೈತರಿಗೆ ರೇಷ್ಮೆ ಉತ್ಪಾದನೆ ಮಾಡುವಂತೆ ಪ್ರೋತ್ಸಾಹಿಸಿದರೆ ಉತ್ತಮ ಲಾಭವನ್ನು ಕಾಣಬಹುದು. ರಾಜ್ಯದಲ್ಲಿ ಕೃಷಿ ಹಾಗೂ ರೇಷ್ಮೆ ಮಾರುಕಟ್ಟೆಯನ್ನು ಉನ್ನತ ಮಟ್ಟಕ್ಕೆ ತರಬೇಕೆಂಬ ಉದ್ದೇಶದಿಂದ ಕೆಲಸ ನಿರ್ವಹಿಸಲಾಗುತ್ತಿದ್ದು, ಸಣ್ಣ ರೈತರು ಸಹ ರೇಷ್ಮೆ ಬೆಳೆಯನ್ನು ಬೆಳೆದು ಲಾಭಗಳಿಸಬಹುದು ಎಂದು ಹೇಳಿದರು.

ರೇಷ್ಮೆ ಉತ್ಪಾದನೆ ಕುರಿತು ಉಪನ್ಯಾಸ ನೀಡಿದ ಕೋಲಾರದ ಪ್ರಗತಿಪರ ರೇಷ್ಮೆ ಬೆಳೆಗಾರ ಸಿ.ಎಲ್.ನಾಗರಾಜು, ರೇಷ್ಮೆ ಉತ್ಪಾದನೆ ವಿಭಿನ್ನವಾಗಿದೆ. ಈ ಬೆಳೆ ಕುರಿತು ತಾಂತ್ರಿಕ ಮಾಹಿತಿ ಪಡೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ರೇಷ್ಮೆ ಇಲಾಖೆ ತಾಂತ್ರಿಕ ಸಮಾವೇಶ ನಡೆಸುತ್ತಿರುವುದು ಮೆಚ್ಚುವ ವಿಷಯ. ಬೆಳೆಗಾರರರಿಗೆ ರೇಷ್ಮೆ ಹುಳುಗಳ ಸಾಕಾಣಿಕೆ, ಅವುಗಳಿಗೆ ನೀಡಬೇಕಾದ ಸ್ಥಳಾವಕಾಶ, ಗೂಡುಗಳ ನಿರ್ವಹಣೆ, ಹುಳು ಸಾಕಾಣಿಕೆಯಲ್ಲಿ ಮನೆ ನಿರ್ಮಾಣ, ಸೋಂಕು ನಿವಾರಣೆ ಮತ್ತು ಹಿಪ್ಪುನೇರಳೆಯನ್ನು ಬಾಧಿಸುವ ನುಸಿಪೀಡೆ ಮತ್ತು ಅದರ ನಿರ್ವಹಣೆಗಳ ಬಗ್ಗೆ ಮಾಹಿತಿ ನೀಡಿದರು.

ರೇಷ್ಮೆ ಇಲಾಖೆ ಉಪನಿರ್ದೇಶಕ ಬಿ.ಪುಟ್ಟಸ್ವಾಮಿ, ಅಪರ ನಿರ್ದೇಶಕ ವೈ.ಟಿ ತಿಮ್ಮಯ್ಯ, ಸರ್ಕಾರಿ ಬಿತ್ತನೆ ಕೋಠಿ ಉಪನಿರ್ದೇಶಕ ಡಿ.ಸೋಮಣ್ಣ, ರೇಷ್ಮೆ ಹುಳು ವಿಭಾಗದ ಮುಖ್ಯಸ್ಥೆ ಡಾ.ಎನ್.ಬಿ.ಜ್ಯೋತಿ, ಸಿಎಸ್‌ಆರ್ ಮತ್ತು ಟಿಐ ವಿಜ್ಞಾನಿ ಡಾ.ಮಹಿಬಾ ಹೆಲನ್, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net