ಬಂಗಾರದ ಬೆಳೆಯತ್ತ ಬೆಳೆಗಾರರ ಚಿತ್ತ

images
Published on

ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ

ರಾಗಿ ಪ್ರಧಾನವಾಗಿರುವ ಗ್ರಾಮಾಂತರ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳೂ ಪ್ರವರ್ಧಮಾನಕ್ಕೆ ಬರುತ್ತಿರುವ ನಡುವೆ ಇತ್ತೀಚಿಗೆ ರೇಷ್ಮೆ ಬೆಳೆಗೂ ಆದ್ಯತೆ ದೊರೆಯುತ್ತಿದೆ. ರೈತಾಪಿ ಜನರ ಬಂಗಾರದ ಬೆಳೆ ಎನಿಸಿರುವ ರೇಷ್ಮೆಕೃಷಿಯತ್ತ ಜಿಲ್ಲೆಯ ಬೆಳೆಗಾರರು ಚಿತ್ತ ಹರಿಸುತ್ತಿದ್ದಾರೆ.

ಹೌದು. ಬಯಲುಸೀಮೆ ಗ್ರಾಮಾಂತರ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ. ಒಂದೆಡೆ ಕೈಗಾರೀಕರಣದ ಕಾರಣಕ್ಕೆ ಸಾವಿರಾರು ಹೆಕ್ಟೇರ್ ಕೃಷಿಭೂಮಿ ಸ್ವಾಧೀನ ಪ್ರಕ್ರಿಯೆಗೆ ಒಳಪಡುತ್ತಿದ್ದರೂ ಕೃಷಿ ಚಟುವಟಿಕೆಗಳು ಹೆಚ್ಚುತ್ತಿವೆ. ಇದರ ನಡುವೆ ರೇಷ್ಮೆ ಬೆಳೆಯತ್ತ ರೈತರು ಒಲವು ತೋರಿಸುತ್ತಿದ್ದಾರೆ. ಕಳೆದೆರಡು ವರ್ಷದಿಂದೀಚೆಗೆ 215 ಹೆಕ್ಟೇರ್‌ನಷ್ಟು ಹಿಪ್ಪುನೇರಳೆ ಬೆಳೆ ವಿಸ್ತೀರ್ಣ ವಿಸ್ತರಣೆಯಾಗಿರುವುದೇ ಇದಕ್ಕೆ ಸಾಕ್ಷಿ. ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ರೇಷ್ಮೇ ಕೃಷಿ ಮುನ್ನೆಲೆಗೆ ಬರುತ್ತಿದ್ದು ಇಲಾಖೆಯ ಅಂಕಿ-ಅಂಶದಂತೆ ಸುಮಾರು 6 ಸಾವಿರ ರೇಷ್ಮೆ ಬೆಳೆಗಾರರಿದ್ದಾರೆ. ಪ್ರಮುಖ ಆರ್ಥಿಕ ಮೂಲವೆನಿಸಿರುವ ರೇಷ್ಮೆ ಬೆಳೆಯನ್ನು ಉಪಕಸುಬಿನ ಬದಲಾಗಿ ಪ್ರಮುಖ ಕಸುಬಾಗಿ ಮುನ್ನೆಲೆಗೆ ಬರುತ್ತಿದೆ.

ಅನುಕೂಲ ವಾತಾವರಣ: ಗ್ರಾಮಾಂತರ ಜಿಲ್ಲೆಯಲ್ಲಿನ ಭೂಮಿ ಹಾಗೂ ಹವಾಗುಣ ರೇಷ್ಮೇ ಬೆಳೆಗೆ ಬಹಳ ಅನುಕೂಲಕರವಾಗಿದೆ, ಲವತ್ತಾದ ಭೂಮಿ, ಬಿಲಿಲು ಹೆಚ್ಚೇ ಇರುವ ವಾತಾವರಣದಿಂದಾಗಿ ರೇಷ್ಮೆಕೃಷಿಗೆ ಅನುಕೂಲಕರವಾದ ವಾತಾವರಣವಿದೆ ಎಂಬುದು ರೇಷ್ಮೇ ಇಲಾಖೆ ಅಧಿಕಾರಿಗಳ ಅಭಿಪ್ರಾಯವಾಗಿದೆ. ಈ ಹಿನ್ನೆಲೆಯಲ್ಲಿ ಇಲಾಖೆ ವತಿಯಿಂದ ರೇಷ್ಮೇಕೃಷಿಯತ್ತ ರೈತರನ್ನು ಸೆಳೆಯಲು ಹಲವು ಕಾರ್ಯಾಗಾರಗಳನ್ನು ಏರ್ಪಡಿಸುತ್ತಿದ್ದು, ರೈತರನ್ನು ಪ್ರೋತ್ಸಾಹಿಸುವ ಕೆಲಸ ಮಾಡಲಾಗುತ್ತಿದೆ. ರೇಷ್ಮೇ ಬೆಳೆಗಾರರಿಗೆ ಮನೆ, ಹನಿ ನೀರಾವರಿ, ಉಚಿತವಾಗಿ ಸೋಂಕುನಿವಾರಕ ದ್ರಾವಣಗಳ ವಿತರಣೆ ಸೇರಿ ಜಮೀನಿನಲ್ಲಿ ಹಿಪ್ಪು ನೇರಳೆ ನಾಟಿಯಿಂದ ಹಿಡಿದು ರೇಷ್ಮೆಯನ್ನು ಮಾರುಕಟ್ಟೆಗಳಲ್ಲಿ ಮಾರಾಟ ಮಾಡುವವರಿಗೆ ಪ್ರತಿ ಹಂತದಲ್ಲಿ ಸಹಾಯಧನ ವಿತರಿಸಲಾಗುತ್ತಿದೆ. ಚಾಕಿಯಲ್ಲಿನ ಸಾವಿರ ಮೊಟ್ಟೆಗೆ 100 ರೂ.ಪ್ರೋತ್ಸಾಹ ಧನ ನೀಡುವ ಮೂಲಕ ರೇಷ್ಮೆ ಕೃಷಿಯತ್ತ ರೈತರನ್ನು ಸೆಳೆಯಲು ಇಲಾಖೆ ಶ್ರಮವಹಿಸುತ್ತಿದೆ.

ಲವತ್ತತೆ ಕಳೆದುಕೊಳ್ಳುತ್ತಿರುವ ಭೂಮಿ: ರಾಗಿ ಪ್ರಧಾನವಾಗಿದ್ದ ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ದೊಡ್ಡಮಟ್ಟದಲ್ಲಿ ತೋಟಗಾರಿಕೆ ಬೆಳೆಗಳು ಮುಂಚೂಣಿಗೆ ಬರುತ್ತಿವೆ, ಅದರಲ್ಲೂ ದಾಳಿಂಬೆ, ದ್ರಾಕ್ಷಿ ಸೇರಿ ಹಲವು ಬಗೆಯ ಹಣ್ಣುಗಳನ್ನು ಬೆಳೆಯಲಾಗುತ್ತಿದೆ. ಇದರೊಂದಿಗೆ ಸೊಪ್ಪು, ತರಕಾರಿ ಬೆಳೆಯೂ ಹೆಚ್ಚು ಬೆಳೆಯಲಾಗುತ್ತಿದೆ. ಆದರೆ ತೋಟಗಾರಿಕೆ ಬೆಳೆಗಳನ್ನು ಕೀಟಬಾಧೆಯಿಂದ ರಕ್ಷಿಸಲು ದೊಡ್ಡ ಪ್ರಮಾಣದಲ್ಲಿ ಕೀಟನಾಶಕ ಬಳಕೆಯಾಗುತ್ತಿದೆ. ಇದು ದಿನೆ ದಿನೇ ಭೂಮಿಯ ಲವತ್ತತೆಯನ್ನು ಕುಂದಿಸುತ್ತಿದೆ. ಸಾಮಾನ್ಯವಾಗಿ ಹಿಪ್ಪುನೇರಳೆ ಬೆಳೆಗೆ ಲವತ್ತಾದ ಭೂಮಿ ಅವಶ್ಯಕತೆ ಇದೆ, ಇಲ್ಲವಾದರೆ ಗುಣಮಟ್ಟದ ಸೊಪ್ಪು ದೊರೆಯುವುದಿಲ್ಲ. ಇದರಿಂದ ರೇಷ್ಮೆಕೃಷಿಯಲ್ಲಿ ನಿರೀಕ್ಷಿತ ಲಾಭ ಪಡೆಯುವುದು ಸಾಧ್ಯವಿಲ್ಲ. ಇದು ಜಿಲ್ಲೆಯಲ್ಲಿ ರೇಷ್ಮೆಕೃಷಿಗೆ ತೊಡಕಾಗಿ ಪರಿಣಮಿಸಿದೆ ಎಂಬ ಮಾತು ಕೇಳಿಬರುತ್ತಿದೆ.

ಮಾಹಿತಿ ಕಾರ್ಯಾಗಾರ: ವಿವಿಧ ಕೃಷಿ ವಿಜ್ಞಾನ ಕೇಂದ್ರಗಳಿಂದ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ತಾಲೂಕು ಮಟ್ಟದಲ್ಲಿ ಹಾಗೂ ಹೋಬಳಿ ಮಟ್ಟದಲ್ಲಿ ರೇಷ್ಮೇಕೃಷಿ ಕಾರ್ಯಾಗಾರಗಳನ್ನು ನಡೆಸಲಾಗುತ್ತಿದೆ.

ಹಿಪ್ಪು ನೇರಳೆ ಸೊಪ್ಪುಗಳಲ್ಲಿ ಕಾಣಿಸಿಕೊಳ್ಳುವ ಕೀಟಬಾಧೆ, ನುಸಿ ರೋಗ ಸೇರಿ ವಿವಿಧ ಸೋಂಕುಗಳ ಬಗ್ಗೆ ಕಾರ್ಯಾಗಾರದಲ್ಲಿ ಮಾಹಿತಿ ನೀಡಲಾಗುತ್ತಿದೆ, ಬೆಳೆ ರಕ್ಷಣೆ, ಹುಳು ಸಾಕಣೆ, ಇಲಾಖೆಯ ಸವಲತ್ತುಗಳು ಸೇರಿ ಬೆಳೆ ಬೆಳೆಯುವ ತರಬೇತಿ ಕುರಿತು ಕಾರ್ಯಾಗಾರ ಹಮ್ಮಿಕೊಳ್ಳಲಾಗುತ್ತಿದೆ, ಮುಖ್ಯುವಾಗಿ ರೇಷ್ಮೇಬೆಳೆಗಾರರಿಗೆ ಸಿಗುವ ಪ್ರೋತ್ಸಾಹಧನಗಳ ಬಗ್ಗೆ ಹೆಚ್ಚೆಚ್ಚು ಪ್ರಚಾರ ಮಾಡಲಾಗುತ್ತಿದೆ.

ರೈತಾಪಿ ಜನರಿಗೆ ಪ್ರಮುಖ ಆರ್ಥಿಕ ಮೂಲವೆನಿಸಿರುವ ಬಂಗಾರದ ಬೆಳೆಯೆಂದೇ ಕರೆಯಲ್ಪಡುವ ರೇಷ್ಮೆ ಕೃಷಿಯತ್ತ ರೈತರನ್ನು ಸೆಳೆಯಲು ಇಲಾಖೆ ವತಿಯಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ರೇಷ್ಮೇಕೃಷಿ ವಿಸ್ತರಣೆಯಾಗುತ್ತಿದೆ, ಹೆಚ್ಚೆಚ್ಚು ರೈತರು ಈ ಕೃಷಿಯತ್ತ ಆಸಕ್ತಿ ತೋರಿಸುತ್ತಿದ್ದಾರೆ. ವರ್ಷಪೂರ್ತಿ ಆರ್ಥಿಕ ಗಳಿಗೆಗೆ ಅನುಕೂಲವಾಗಿರುವ ರೇಷ್ಮೆಕೃಷಿ ಬಗ್ಗೆ ಇಲಾಖೆ ವತಿಯಿಂದ ಎಲ್ಲ ಹಂತದಲ್ಲೂ ಸಹಕಾರ ನೀಡಲಾಗುತ್ತಿದೆ.

ಲಕ್ಷ್ಮಣ್ ಉಪ ನಿರ್ದೇಶಕ, ರೇಷ್ಮೆ ಇಲಾಖೆ ಬೆಂ.ಗ್ರಾಮಾಂತರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net