ಸರಣಿ ಕಳ್ಳತನ, ಸಿಸಿ ಕ್ಯಾಮೆರಾದಲ್ಲಿ ಕಳ್ಳರ ಕೈ ಚಳಕ ಸೆರೆ

27 Gudi Photo-3
Published on

ಚಿಕ್ಕಬಳ್ಳಾಪುರ: ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿ ಕ್ರಾಸ್ ನಲ್ಲಿರುವ ಸೂಪರ್ ಮಾರ್ಕೆಟ್ ಸೇರಿ ಇತರೆ 5 ಅಂಗಡಿಗಳಲ್ಲಿ ಸರಣಿ ಕಳ್ಳತನ ನಡೆದಿದ್ದು ಕಳ್ಳರು ತೋರಿಸುತ್ತಿರುವ ಕೈ ಚಳಕವು ಸಂಪೂರ್ಣವಾಗಿ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. 18 ರಿಂದ 20 ವರ್ಷದೊಳಗಿನ ಯುವಕರು ರಾತ್ರಿ ಇಲ್ಲಿನ ಮಧುಸೂದನ್ ರೆಡ್ಡಿ ಎಂಬುವರಿಗೆ ಸೇರಿದ ಸೂಪರ್ ಮಾರ್ಕೆಟ್, ಕಿಶೋರ್ ಮಾಲೀಕತ್ವದ ಮೊಬೈಲ್ ಅಂಗಡಿ, ಸುರೇಶ್‌ಗೆ ಸೇರಿದ ಕೆನರಾ ಬ್ಯಾಂಕ್ ಮಿತ್ರ ಕೇಂದ್ರ, ವೆಂಕಟರೋಣಪ್ಪಗೆ ಸೇರಿದ ತರಕಾರಿ ಅಂಗಡಿ ಹಾಗೂ ಕಾಂಡಿಮೆಂಟ್ಸ್ಗೆ ನುಗ್ಗಿದ್ದಾರೆ. ಲಕ್ಷಾಂತರ ರೂ ಮೌಲ್ಯದ ಮಾಲನ್ನು ಕದ್ದು ಪರಾರಿಯಾಗಿದ್ದಾರೆ. ಇದೆಲ್ಲವೂ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದರ ಆಧಾರದ ಮೇಲೆ ಪೊಲೀಸರು ತನಿಖೆ ಕೈಗೊಂಡು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಘಟನೆಯ ಸ್ಥಳಕ್ಕೆ ಗುಡಿಬಂಡೆ ಠಾಣೆ ಪೊಲೀಸರು, ಬೆರಳಚ್ಚು ತಜ್ಞರ ತಂಡ ಭೇಟಿ ಪರಿಶೀಲಿಸಿತು.

*ಮಾಂಗಲ್ಯ ಸರ ಕಿತ್ತುಕೊಂಡು ಪರಾರಿ
ಗೌರಿಬಿದನೂರು ನಗರದ ಶ್ರೀ ಪಾಂಡುರಂಗಸ್ವಾಮಿ ದೇವಾಲಯದ ಸಮೀಪ ನಾಯಿ ಮರಿಯೊಂದಿಗೆ ವಾಕಿಂಗ್‌ಗೆ ತೆರಳುತ್ತಿದ್ದ ಗೃಹಿಣಿಯ ಕೊರಳಿನಿಂದ ಮಾಂಗಲ್ಯ ಸರ ಕಿತ್ತುಕೊಂಡು ಕಳ್ಳರು ಪರಾರಿಯಾಗಿದ್ದಾರೆ.
ಇಲ್ಲಿನ ಮಾಧವ ನಗರದ ಅನಿತಾ (43) ರಾತ್ರಿ 7 ರ ವೇಳೆ ನಾಯಿಮರಿಯನ್ನು ಕರೆದುಕೊಂಡು ವಾಕಿಂಗ್‌ಗೆ ಹೋಗುತ್ತಿದ್ದಾಗ ರಸ್ತೆಯಲ್ಲಿ ನಿಲ್ಲಿಸಿದ್ದ ಬಿಳಿ ಬಣ್ಣದ ಕಾರಿನ ಚಾಲಕನೊಬ್ಬ ಬಂದು ವಿದ್ಯಾನಿಧಿ ಶಾಲೆ ಯಾವ ಕಡೆ ಇದೆ ಎಂಬುದಾಗಿ ವಿಳಾಸ ಕೇಳಿದ್ದಾನೆ. ಇದಕ್ಕೆ ಮಾನವೀಯತೆಯಿಂದ ಪ್ರತಿಕ್ರಿಯಿಸಿ, ಮುಂದೆ ಬರುತ್ತಿದ್ದಂತೆ ದ್ವಿಚಕ್ರ ವಾಹನದಲ್ಲಿ ಕುಳಿತಿದ್ದ ಇಬ್ಬರು ವ್ಯಕ್ತಿಗಳ ಪೈಕಿ ಒಬ್ಬ ಮಹಿಳೆಯ ಕತ್ತಿನಲ್ಲಿದ್ದ 80 ಗ್ರಾಂ ತೂಕದ ಬಂಗಾರದ ಮಾಂಗಲ್ಯ ಸರವನ್ನು ಕಿತ್ತುಕೊಂಡಿದ್ದಾನೆ. ಹಾಗೆಯೇ ಕ್ಷಣಾರ್ಧದಲ್ಲಿ ಕಳ್ಳರು ನಾಪತ್ತೆಯಾಗಿದ್ದಾರೆ. ಗೌರಿಬಿದನೂರು ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

*ಸೂಕ್ತ ಕ್ರಮಕ್ಕೆ ಆಗ್ರಹ
ಇತ್ತೀಚೆಗೆ ಸರಣಿ ಕಳ್ಳತನ, ಬೈಕಿನಲ್ಲಿ ಬಂದು ಮಹಿಳೆಯರ ಸರವನ್ನು ಕಿತ್ತುಕೊಂಡು ಪರಾರಿಯಾಗುವುದು ಸೇರಿದಂತೆ ಅಪರಾಧ ಪ್ರಕರಣಗಳು ವರದಿಯಾಗುತ್ತಿವೆ. ಈ ನಿಟ್ಟಿನಲ್ಲಿ ಪೊಲೀಸ್ ಬಿಗಿ ಬಂದೋ ಬಸ್ತ್ ಕೈಗೊಳ್ಳಬೇಕು. ಕಳ್ಳರನ್ನು ತಕ್ಷಣ ಪತ್ತೆ ಹಚ್ಚಿ, ಬಂಧಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net