

ನಾಲತವಾಡ: ಪಟ್ಟಣದಲ್ಲಿ ಸೋಮವಾರ ರಾತ್ರಿ ಕಳ್ಳರು ನಾಲ್ಕು ಮನೆಗಳ ಬೀಗಮುರಿದು ಎಂಟು ತೊಲೆ ಬಂಗಾರ, 40 ಸಾವಿರಕ್ಕಿಂತಲೂ ಹೆಚ್ಚು ನಗದು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.
ವೀರೇಶ್ವರ ದೇವಸ್ಥಾನದ ಪಕ್ಕದ ಸೋಮಪ್ಪ ಸಜ್ಜನ ಅವರ ಮನೆಯಲ್ಲಿ ಬಾಡಿಗೆಗೆ ವಾಸವಾಗಿರುವ ಆಶಾ ಕಾರ್ಯಕರ್ತೆ ಅಂಬ್ರಮ್ಮ ಮಡಿವಾಳಯ್ಯ ಹಿರೇಮಠ ಅವರ ಮನೆಯಲ್ಲಿ 6 ತೊಲೆ ಬಂಗಾರ ಹಾಗೂ 20 ಸಾವಿರ ರೂಪಾಯಿ ನಗದು ಹಣ, ನಾಡಗೌಡ ಓಣಿಯ ನಿವಾಸಿ ಚನ್ನಬಸಪ್ಪ ಗುರಿಕಾರ ಎಂಬುವವರ ಮನೆಯಲ್ಲಿ ಬೀರು ಒಡೆದು ಅದರಲ್ಲಿದ್ದ 20 ಸಾವಿರ ರೂಪಾಯಿ ಹಾಗೂ 2 ತೊಲಿ ಬಂಗಾರವನ್ನು ಕದ್ದಿದ್ದಾರೆ. ಬಸವರಾಜ ಹೌಶಟ್ಟಿ ಎಂಬುವವರ ಮನೆಯ ಬಾಗಿಲು ಮುರಿದು ಮನೆಯ ತುಂಬ ತಡಕಾಡಿ ನಗದು, ಚಿನ್ನಾಭರಣ ಸಿಗಲಿಲ್ಲವೆಂದು ಬೆಲೆಬಾಳುವ 2 ಸೀರೆಗಳನ್ನು ಹೊತ್ತುಕೊಂಡು ಹೋಗಿದ್ದಾರೆ. ಇನ್ನು ಗುರುಲಿಂಗಪ್ಪ ಕುಂಬಾರ ಹಾಗೂ ಅಬ್ದುಲಸಾಬ ಹಣಗಿ ಅವರ ಮನೆಯ ಬಾಗಿಲು ಮುರಿದು ಹೋಗಿದ್ದಾರಾದರೂ ಅವರ ಮನೆಯಲ್ಲಿ ಯಾವುದೇ ವಸ್ತು ಕಳ್ಳತನವಾಗಿಲ್ಲ ಎಂದು ತಿಳಿದುಬಂದಿದೆ. ಮುದ್ದೇಬಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ನಡೆದಿದೆ.
ಮಂಗಳವಾರ ಬೆಳಗ್ಗೆ ವಿಷಯ ತಿಳಿದು ಘಟನಾ ಸ್ಥಳಕ್ಕೆ ಮುದ್ದೇಬಿಹಾಳ ಪಿಎಸೈ ಸಂಜೀವ ತಿಪ್ಪಾರೆಡ್ಡಿ ಕ್ರ್ತ್ರೈ ಪಿಎಸೈ ಮನ್ನಾಬಾಯಿ ನಾಯಕ ತಂಡ ಭೇಟಿ ನೀಡಿ ಎಲ್ಲಾ ಮನೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಪಟ್ಟಣದಲ್ಲಿನ ಎಲ್ಲಾ ಸಿಸಿ ಟಿವಿಗಳನ್ನು ಪರಿಶೀಲನೆಗೊಳಪಡಿಸಿ, ಶೀಘ್ರವಾಗಿ ಕಳ್ಳರನ್ನು ಪತ್ತೆಮಾಡಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದು, ತನಿಖೆ ಮುಂದುವರಿಸಿದ್ದಾರೆ.