ಇಳಕಲ್ಲ ನಗರದಲ್ಲಿ ಸರಣಿ ಕಳ್ಳತನ

18 ilk crime-1
ಇಳಕಲ್ಲ ನಗರದ ವಿವಿಧ ಅಂಗಡಿಗಳಲ್ಲಿ ಕಳ್ಳರು ಕಳ್ಳತನ ಮಾಡಿರುವುದು.
Published on

ಇಲಕಲ್ಲ: ನಗರದ ವಿವಿಧ ಭಾಗದ ಏಳು ಅಂಗಡಿಗಳಲ್ಲಿ ಕಳ್ಳರು ಸೋಮವಾರ ಮಧ್ಯರಾತ್ರಿ ಸರಣಿ ಕಳ್ಳತನ ನಡೆಸಿ, ಲಕ್ಷಾಂತರ ರೂ., ಗಳನ್ನು ದೋಚಿದ್ದಾರೆ.

ಘಟನಾ ಸ್ಥಳಗಳಿಗೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ತನಿಖೆ ಕೈಗೊಂಡಿದ್ದಾರೆ. ಕಳ್ಳರು ಮಧ್ಯರಾತ್ರಿ ಕಬ್ಬಿಣದ ರಾಡ್ ಹಿಡಿದು ರಾಜಾರೋಷವಾಗಿ ತಿರುಗಾಡುತ್ತಿರುವುದು ಪ್ರಮುಖ ರಸ್ತೆಗಳಲ್ಲಿನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಸರಣಿ ಕಳ್ಳತನದಿಂದಾಗಿ ನಗರದ ಜನತೆ ಭಯಭೀತರಾಗಿದ್ದಾರೆ.
ಬಸವೇಶ್ವರ ವೃತ್ತದಲ್ಲಿನ ಸಜ್ಜನ್ ಕಾಂಪ್ಲೆಕ್ಸ್‌ನ ಮೆಡಿಪ್ಲೆಸ್ ಔಷಧ ಅಂಗಡಿಯಲ್ಲಿ 1,40,000 ರೂ., ವರಲಕ್ಷ್ಮೀ ಮೆಡಿಕಲ್ ಸ್ಟೋರ್ಸ್‌ನಲ್ಲಿ 10,000 ರೂ. ಗಳನ್ನು ಕಳ್ಳತನ ಮಾಡಿದ ಕಳ್ಳರು, ಬಿಜ್ಜಲ್ ಕಾಂಪ್ಲೆಕ್ಸ್‌ದಲ್ಲಿನ ಅಭಯಾ ಗೋಲ್ಡ್, ಪೀಟರ್ ಇಂಗ್ಲೆಂಡ್ ಅಂಗಡಿ, ವರಲಕ್ಷ್ಮೀ ಟಯರ್ಸ್, ನಂದಿನಿ ಮಿಲ್ಕ್‌ಪಾರ್ಲರ್ ಅಂಗಡಿಗೆ ನುಗ್ಗಿ ನೂರಾರು ರೂ. ಗಳ ಚಿಲ್ಲರೆ ಕಾಸು ದೋಚಿ ಪರಾರಿಯಾಗಿದ್ದಾರೆ.

ಅಲ್ಲದೆ, ಬಸ್ ನಿಲ್ದಾಣದಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರ ಜೇಬಿನಿಂದ 35,000 ರೂ. ಬೆಲೆಬಾಳುವ ಮೊಬೈಲ್ ಕಳ್ಳತನ ಮಾಡಿರುವುದು ದೂರಿನಲ್ಲಿ ದಾಖಲಾಗಿದೆ.

ಇಳಕಲ್ಲ ನಗರದಲ್ಲಿ ಸರಣಿಗಳ್ಳತನ ಪ್ರಕರಣದಿಂದ ಜನತೆ ಆತಂಕ ವ್ಯಕ್ತಪಡಿಸುವಂತಾಗಿದೆ. ನಗರದಲ್ಲಿ ರಾತ್ರಿ ವೇಳೆ ಇನ್ನೂ ಹೆಚ್ಚಿನ ಗಸ್ತು ಸಿಬ್ಬಂದಿ ನಿಯೋಜಿಸಬೇಕು. ಪೊಲೀಸರು ಕೂಡಲೇ ಕಳ್ಳರನ್ನು ಪತ್ತೆ ಹಚ್ಚಬೇಕಿದೆ. ಅಲ್ಲದೆ, ನಗರಸಭೆ ಹಾಗೂ ಪೊಲೀಸ್ ಇಲಾಖೆ ಎಲ್ಲೆಡೆ ಸಮರ್ಪಕವಾಗಿ ಸಿಸಿ ಕ್ಯಾಮರಾಗಳನ್ನು ಅಳವಡಿಸುವ ಕಾರ್ಯಮಾಡಬೇಕಿದೆ.
ಸತೀಶ ಸಪ್ಪರದ, ಪೀಟರ್ ಇಂಗ್ಲೆಂಡ್ ಬಟ್ಟೆ ಅಂಗಡಿ ಮಾಲೀಕರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net