

ಬಾಳೆಹೊನ್ನೂರು: ಪಟ್ಟಣದ ಆರು ಅಂಗಡಿಗಳಲ್ಲಿ ಬುಧವಾರ ರಾತ್ರಿ ಸರಣಿ ಕಳವು ಮಾಡಲಾಗಿದ್ದು, ಕೆಲವು ಅಂಗಡಿಗಳಲ್ಲಿ ಕಳವಿನ ಯತ್ನ ವಿಫಲವಾಗಿದೆ.
ಬಸ್ ನಿಲ್ದಾಣದ ಕದಮ್ ಫೂಟ್‌ವೇರ್, ಆಂಜನೇಯ ಸ್ಟೋರ್ಸ್, ರೂಪಂ ಟೈಲರ್ ಅಂಗಡಿ, ಮುಖ್ಯರಸ್ತೆಯ ಇಂಚನಾ ಬ್ಯೂಟಿಪಾರ್ಲರ್, ಎನ್.ಆರ್.ಪುರ ಈಗೋ ಮೊಬೈಲ್ಸ್ ಅಂಗಡಿಗೆ ಬುಧವಾರ ರಾತ್ರಿ ನುಗ್ಗಿ ಕೆಲ ವಸ್ತುಗಳನ್ನು ಹಾಗೂ ಅಲ್ಪ ಪ್ರಮಾಣದ ನಗದನ್ನು ದೋಚಿದ್ದಾರೆ. ಬಸ್ ನಿಲ್ದಾಣದ ನವೀನ್ ಹೇರ್ ಡ್ರೆಸ್ಸರ್ಸ್‌ನ ಛಾವಣಿ ಹೆಂಚು ತೆಗೆದು ಕಳವಿಗೆ ಯತ್ನಿಸಿದ್ದಾರೆ. ಗುರುವಾರ ಬೆಳಗ್ಗೆ ಅಂಗಡಿ ಬಾಗಿಲು ತೆರೆದಾಗ ಕೃತ್ಯ ಬೆಳಕಿಗೆ ಬಂದಿದೆ.
ಪಿಎಸ್‌ಐ ರವೀಶ್, ಅಪರಾಧ ವಿಭಾಗದ ಪಿಎಸ್‌ಐ ಅಭಿಷೇಕ್ ಸ್ಥಳ ಪರಿಶೀಲಿಸಿದರು. ಪಟ್ಟಣದ ವಿವಿಧ ಭಾಗಗಳಲ್ಲಿ ಅಳವಡಿಸಿರುವ ಸಿಸಿ ಟಿವಿಯ ದೃಶ್ಯಗಳನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.