

ಮದ್ದೂರು: ಪಟ್ಟಣದ ಶಿವಪುರದ ಕೊಪ್ಪ ವೃತ್ತದ ಬಳಿ ಭಾನುವಾರ ತಡರಾತ್ರಿ ಕಳ್ಳರು ಅಂಗಡಿ ಮಳಿಗೆಗಳ ಛಾವಣಿ ಮುರಿದು ಒಳನುಗ್ಗಿ ಸರಣಿ ಕಳ್ಳತನ ಮಾಡಿರುವ ಜತೆಗೆ ನಗದು ಹಾಗೂ ಇನ್ನಿತರ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ.
ಪಟ್ಟಣದ ಕೊಪ್ಪ ವೃತ್ತದ ಬಳಿ ಇರುವ ಮೂರು ಅಂಗಡಿಗಳನ್ನು ಒಳ ಪ್ರವೇಶಿಸಿರುವ ದುಷ್ಕರ್ಮಿಗಳು ಸರಣಿ ಕಳ್ಳತನ ನಡೆಸಿ ಸಿ.ಸಿ.ಕ್ಯಾಮರಾಗಳ ಎಲೆಕ್ಟ್ರಾನಿಕ್ ವಸ್ತುಗಳು ಮತ್ತು ನಾಲ್ಕು ಸಾವಿರ ರೂ. ನಗದು ದೋಚಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಶಿವಪುರದ ದುರ್ಗಾ ಪರಮೇಶ್ವರಿ ಟ್ರೇಡರ್ಸ್ ಮಾಲೀಕರಾದ ಸ್ವಾಮಿ ಎಂಬುವವರಿಗೆ ಸೇರಿದ ಕಬ್ಬಿಣದ ಅಂಗಡಿಯಲ್ಲಿ 20 ಸಾವಿರ ರೂ. ಮೌಲ್ಯದ ಅಗತ್ಯ ವಸ್ತುಗಳು ಮತ್ತು ವರ್ಕ್‌ಶಾಪ್ ಮಾಲೀಕರಾದ ಅಂದಾನಯ್ಯ ಮಳಿಗೆ ಮತ್ತು ಪ್ರದೀಪ್ ಅವರ ಡೆಕೋರೇಷನ್ ಅಂಗಡಿಗೆ ಅಳವಡಿಸಿದ್ದ ಸಿ.ಸಿ.ಕ್ಯಾಮರಾ ಇನ್ನಿತರ ವಸ್ತುಗಳು ಮತ್ತು 4 ಸಾವಿರ ರೂ. ನಗದು ಸೇರಿದಂತೆ ಮೂರು ಅಂಗಡಿಗಳಲ್ಲಿ ಸುಮಾರು 60 ಸಾವಿರ ರೂ.ಗಳಿಗೂ ಹೆಚ್ಚು ವಸ್ತುಗಳನ್ನು ದೋಚಿರುವುದಾಗಿ ತಿಳಿದುಬಂದಿದೆ.
ಬೆಳಗ್ಗೆ ಅಂಗಡಿಗಳ ಬಾಗಿಲು ತೆರೆದ ವೇಳೆ ಪ್ರಕರಣ ಬೆಳಕಿಗೆ ಬಂದಿದ್ದು ಮೂರು ಅಂಗಡಿಗಳಿಗೆ ಅಳವಡಿಸಿದ್ದ ಛಾವಣಿಯ ಶೀಟ್‌ಗಳನ್ನು ಮುರಿದು ಒಳಪ್ರವೇಶಿಸಿ ಕಳ್ಳತನ ನಡೆಸಿದ್ದು ಈ ಸಂಬಂಧ ಮದ್ದೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಸ್ಥಳೀಯ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಂಡಿದ್ದಾರೆ.