

ಉಡುಪಿ: ಉಡುಪಿ ನಗರದಲ್ಲಿ 2 ತಿಂಗಳ ಹಿಂದೆ ನಡೆದ ಸರಣಿ ಸುಲಿಗೆ ಪ್ರಕರಣದಂತೆ ಮಂಗಳವಾರ ಬೆಳಗ್ಗೆ 7 ರಿಂದ 9 ಗಂಟೆ ಅವಧಿಯಲ್ಲಿ ಉಡುಪಿ ಮತ್ತು ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ಮತ್ತೆ ನಾಲ್ವರು ಮಹಿಳೆಯರ ಕುತ್ತಿಗೆಯಲ್ಲಿದ್ದ ಸರಗಳನ್ನು ಬೈಕಿನಲ್ಲಿ ಬಂದ ಯುವಕನೊಬ್ಬ ಕಳವು ಮಾಡಿದ್ದಾನೆ.
ಬೆಳಗ್ಗೆ 7 ಗಂಟೆಗೆ ಮಣಿಪಾಲದ ವಿ.ಪಿ. ನಗರದಲ್ಲಿರುವ ಕಾಮಾಕ್ಷಿ ದೇವಸ್ಥಾನಕ್ಕೆ ನಡೆದುಕೊಂಡು ಹೋಗುತ್ತಿದ್ದ ಚಂದ್ರಮೌಳಿ ಪದ್ಮಿನಿ ದೇವಿ ರುದ್ರಪ್ರಿಯನಗರದ ಬಳಿ ತಲುಪಿದಾಗ ಹಿಂದಿನಿಂದ ಬೈಕ್‌ನಲ್ಲಿ ಬಂದ ಅಪರಿಚಿತ ವ್ಯಕ್ತಿ ಅವರ ಕುತ್ತಿಗೆಯಲ್ಲಿದ್ದ 1.25 ಲಕ್ಷ ರೂ. ಮೌಲ್ಯದ 30 ಗ್ರಾಂ ಚಿನ್ನದ ಸರ ಎಳೆದುಕೊಂಡು ಹೋಗಿದ್ದಾನೆ.
ಬೆಳಗ್ಗೆ 8.30ಕ್ಕೆ ಸಂತೋಷನಗರ ಬಸ್ಸು ನಿಲ್ದಾಣದಲ್ಲಿ ಇಳಿದು ಪಂಜುರ್ಲಿ ದೈವಸ್ಥಾನದ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ಜಯಂತಿ (55) ಎಂಬುವರ ಕುತ್ತಿಗೆಯಲ್ಲಿದ್ದ 10 ಗ್ರಾಂ ತೂಕದ 50 ಸಾವಿರ ರೂ. ಮೌಲ್ಯದ ಚಿನ್ನದ ಸರವನ್ನು ಬೈಕ್‌ನಲ್ಲಿ ಬಂದ ವ್ಯಕ್ತಿ ಎಳೆದುಕೊಂಡು ಹೋಗಿದ್ದು, ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಬೆಳಗ್ಗೆ 8.45ಕ್ಕೆ ಗುಲಾಬಿ ನಾಯ್ಕ್ ಎಂಬುವರು ಶಿವಳ್ಳಿ ಗ್ರಾಮದ ಎಂಜಿಎಂ ಗ್ರೌಂಡ್ ಹತ್ತಿರ ಶಾಂತಾ ದುರ್ಗಾ ಅಪಾರ್ಟ್‌ಮೆಂಟ್ ಬಳಿ ಕಡಿಯಾಳಿ ಕಡೆಗೆ ಹೋಗುತ್ತಿದ್ದಾಗ ಅಪರಿಚಿತ ವ್ಯಕ್ತಿ ಬೈಕ್‌ನನಲ್ಲಿ ಬಂದು ಕುತ್ತಿಗೆಗೆ ಕೈಹಾಕಿ, ಸರ ಎಳೆದಿದ್ದು ಸರ ಎರಡು ತುಂಡಾಗಿ, ಅಂದಾಜು ರೂ. 50 ಸಾವಿರ ಮೌಲ್ಯದ ಒಂದು ತುಂಡು ಚಿನ್ನದ ಸರ ಕಳ್ಳನ ಪಾಲಾಗಿದೆ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ರಹ್ಮಗಿರಿಯ ಸಾಯಿರಾಧಾ ಪ್ರೈಡ್ ಅಪಾರ್ಟ್‌ಮೆಂಟಿನಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡಿಕೊಂಡಿದ್ದ ಯಶೋದಾ ಜೆ. ಬಂಗೇರ (38) ಮಂಗಳವಾರ ಬೆಳಗ್ಗೆ 9 ಗಂಟೆಗೆ ಸೈಂಟ್ ಸಿಸಿಲಿ ಶಾಲೆಯ ಒಳರಸ್ತೆಯ ಮೂಲಕ ಬ್ರಹ್ಮಗಿರಿ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಮೋಟಾರು ಸೈಕಲಿನಲ್ಲಿ ಬಂದ 30 ರಿಂದ 35 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿ ಕುತ್ತಿಗೆಗೆ ಕೈ ಹಾಕಿ ಮಾಂಗಲ್ಯ ಸರ ಎಳೆದಿದ್ದು, ಮಹಿಳೆ ಸರವನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದು, ಎರಡು ತುಂಡಾಗಿತ್ತು. ಒಂದು ತುಂಡು ಹಿಡಿದುಕೊಂಡು ಕಳ್ಳ ಪರಾರಿಯಾಗಿದ್ದಾನೆ. ಅಂದಾಜು ಹತ್ತು ಗ್ರಾಂ ತೂಕದ 45 ಸಾವಿರ ರೂ. ಮೌಲ್ಯದ ಚಿನ್ನ ಕಳ್ಳನ ಪಾಲಾಗಿದೆ.