

ವಿಜಯವಾಣಿ ಸುದ್ದಿಜಾಲ ಮಂಗಳೂರು
ಕೆಲ ದಿನಗಳ ಹಿಂದೆಯಷ್ಟೇ ಮೂಡುಬಿದಿರೆ, ಮೂಲ್ಕಿ, ಬಜ್ಪೆ ಠಾಣಾ ವ್ಯಾಪ್ತಿಯಲ್ಲಿ ಸರಣಿ ದರೋಡೆ, ವಾಹನ ಅಡ್ಡಗಟ್ಟಿ ದೋಚುವುದು ಇತ್ಯಾದಿ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದ ತಂಡವನ್ನು ಮಂಗಳೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ತಂಡವು ರಾಜ್ಯವ್ಯಾಪ್ತಿಯಲ್ಲಿ ಒಟ್ಟು ಸುಮಾರು 13ರಷ್ಟು ವಿವಿಧ ಅಪರಾಧಗಳಲ್ಲಿ ತೊಡಗಿಸಿಕೊಂಡಿದ್ದೂ ಇನ್ನೂ ನಾಲ್ವರು ಪ್ರಮುಖ ಆರೋಪಿ ಸಹಿತ 20ರಷ್ಟು ಆರೋಪಿಗಳ ಬಂಧನ ಆಗಬೇಕಿದೆ.
ಕಳೆದ ನಾಲ್ಕು ವರ್ಷಗಳಲ್ಲಿ ಸಕ್ರಿಯವಾಗಿದ್ದ ಈ ತಂಡ ಶೋಕಿಯ ಜೀವನ ನಡೆಸುವುದಕ್ಕಾಗಿ ಮನೆಗಳವು, ಮನೆಯಲ್ಲಿ ಜನರಿದ್ದರೆ ಬೆದರಿಸಿ ದರೋಡೆಯಂತಹ ಕೃತ್ಯ ನಡೆಸುತ್ತಿತ್ತು. ಕೃತ್ಯಕ್ಕೆ ಸಂಬಂಧಿಸಿ ಏ.1ರಂದು ಅಬ್ದುಲ್ ರವೂಫ್ ಹಾಗೂ ರಾಮಮೂರ್ತಿ ಎಂಬವರನ್ನು ಬಂಧಿಸಲಾಗಿತ್ತು, ಅವರು ನೀಡಿದ ಮಾಹಿತಿಯ ಅನ್ವಯ ಅಶ್ರಫ್ ಪೆರಾಡಿ(27), ಸಂತೋಷ್(24), ನವೀದ್(36), ರಮಾನಂದ ಶೆಟ್ಟಿ(48), ಸುಮನ್(24), ಸಿದ್ದಿಕ್(27), ಆಲಿಕೋಯ ಎಂಬವರನ್ನು ಬಂಧಿಸಲಾಗಿದೆ.
ಆರೋಪಿಗಳು ಪೂಂಜಾಲಕಟ್ಟೆಯಲ್ಲಿ ಸಾಕಷ್ಟು ಸಂಚಲನ ಮೂಡಿಸಿದ್ದ ಮನೆ ದರೋಡೆ, ಬೆಂಗಳೂರು, ಅರೆಹಳ್ಳಿ, ಉಪ್ಪಿನಂಗಡಿ, ಮೂಡುಬಿದಿರೆ, ಮೂಲ್ಕಿ, ಬಜ್ಪೆ ಠಾಣೆ ವ್ಯಾಪ್ತಿಯ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದವರು.