

ಗುಂಡ್ಲುಪೇಟೆ : ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿ ಬುಧವಾರ ಮುಂಜಾನೆ ಐದು ಮನೆಗಳಲ್ಲಿ ಸರಣಿ ಕಳ್ಳತನವಾಗಿದೆ. ಮನೆಗಳ ಬಾಗಿಲ ಬೀಗ ಮುರಿದು ಒಳನುಗ್ಗಿರುವ ಖದೀಮರು ನಗ ನಾಣ್ಯ ದೋಚಿ ಪರಾರಿಯಾಗಿದ್ದಾರೆ.
ಗ್ರಾಮದ ಹಂಡೇಗೋಪಾಲಸ್ವಾಮಿ ದೇವಸ್ಥಾನದ ಸಮೀಪದ ಮನೆಗಳಲ್ಲಿ ಕಳ್ಳರು ಬಾಗಿಲಿನ ಬೀಗ ಮುರಿದು ನಗನಾಣ್ಯಗಳನ್ನು ಕಳ್ಳತನ ಮಾಡಿದ್ದಾರೆ. ಎ.ಪಿ.ನಾಗರಾಜು, ರವಿ, ಕುಮಾರ, ರೇಷ್ಮಾ, ಪುಟ್ಟತಾಯಮ್ಮ ಅವರ ಮನೆಗಳ ಬೀಗ ಮುರಿದು ಒಳಗೆ ಪ್ರವೇಶಿಸಿದ ಕಳ್ಳರು ಬೀರು ಬೀಗ ಮುರಿದು ಚಿನ್ನಾಭರಣಗಳು ಹಾಗೂ ಲಕ್ಷಾಂತರ ರೂ. ನಗದು ಕದ್ದೊಯ್ದಿದ್ದಾರೆ.
ಮನೆಗಳಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ ದುಷ್ಕರ್ಮಿಗಳು ಬೀಗ ಮುರಿದು ಕಳ್ಳತನ ಮಾಡಿದ್ದಾರೆ. ಮನೆಯವರು ಬಂದ ನಂತರ ದೂರು ಕೊಡುವಂತೆ ತಿಳಿಸಲಾಗಿದೆ. ಸ್ಥಳಕ್ಕೆ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸದ್ಯದಲ್ಲಿಯೇ ದುಷ್ಕರ್ಮಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗೆ ಗ್ರಾಮದಲ್ಲಿ ಪೊಲೀಸರು ರಾತ್ರಿ ಗಸ್ತು ನಡೆಸುತ್ತಿಲ್ಲ. ಇದುವರೆಗೆ ಸುಮಾರು 20ಕ್ಕೂ ಹೆಚ್ಚಿನ ಮನೆಗಳಲ್ಲಿ ಹಾಡಹಗಲೇ ದುಷ್ಕರ್ಮಿಗಳು ಮನೆಗೆ ನುಗ್ಗಿ ಮಹಿಳೆಯರ ಚಿನ್ನಾಭರಣ ಕಿತ್ತುಕೊಂಡು ಹೋಗಿದ್ದರು. ಘಟನೆ ಮರೆಯಾಗುವ ಮೊದಲೇ ಮನೆಗಳ ಬೀಗ ಮುರಿದು ಸರಣಿ ಕಳ್ಳತನ ಮಾಡಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.