

ಶಿವಮೊಗ್ಗ: ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ವಾರಾಂತ್ಯ ಮೂರ್ನಾಲ್ಕು ದಿನ ರಜೆ ಸಿಕ್ಕಿ ಕಾರಣಕ್ಕೆ ಮನೆಗಳಿಗೆ ಬೀಗ ಹಾಕಿ ಸ್ವಂತ ಊರುಗಳಿಗೆ ತೆರಳಿದ್ದ ಕೆಲ ಸರ್ಕಾರಿ ನೌಕರರಿಗೆ ಮನೆಗಳ್ಳರು ಶಾಕ್ ನೀಡಿದ್ದಾರೆ. ನಗರದ ಬಸವನಗುಡಿಯ ಪಿಡಬ್ಲ್ಯೂಡಿ (ಲೋಕೋಪಯೋಗಿ ಇಲಾಖೆ) ಕ್ವಾಟ್ರರ್ಸ್‌ನಲ್ಲಿ ಒಂದೇ ದಿನ ಐದಾರು ಮನೆಗಳಿಗೆ ನುಗ್ಗಿ ಲಕ್ಷಾಂತರ ರೂ. ನಗದು ಹಾಗೂ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಲಾಗಿದ್ದು ಸರಣಿ ಮನೆಗಳ್ಳತನಕ್ಕೆ ಶಿವಮೊಗ್ಗದ ಜನತೆ ಬೆಚ್ಚಿ ಬಿದ್ದಿದ್ದಾರೆ.
ರೇಷ್ಮೆ ಇಲಾಖೆ ಉಪ ನಿರ್ದೇಶಕ ಮುರುಳೀಧರ್, ಜಿಲ್ಲಾಧಿಕಾರಿ ಆಪ್ತ ಸಹಾಯಕ ದೀಪಕ್, ಅಪರ ಜಿಲ್ಲಾಧಿಕಾರಿ ಆಪ್ತ ಸಹಾಯಕಿ ಸಂಧ್ಯಾ, ವಾಣಿಜ್ಯ ತೆರಿಗೆ ಇಲಾಖೆ ಸ್ಟೆನೋಗ್ರಾಫರ್ ನಂದಿನಿ, ನ್ಯಾಯಾಧೀಶರ ಕಾರು ಚಾಲಕ ಪ್ರಕಾಶ್ ಎಂಬುವರ ಮನೆಯಲ್ಲಿ ಕಳ್ಳತನವಾಗಿದೆ. ವಾರ್ತಾ ಇಲಾಖೆ ಸಹಾಯಕಿ ಭಾಗ್ಯಾ ಅವರ ಮನೆಯಲ್ಲೂ ಕಳ್ಳತನಕ್ಕೆ ಯತ್ನ ನಡೆದಿದೆ.
ಶನಿವಾರ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಇದ್ದ ಕಾರಣ ಬೀಟ್ ಪೊಲೀಸರು ಕೂಡ ಅತ್ತ ಸುಳಿದಿಲ್ಲ. ಇದನ್ನು ಅರಿತ ಕಳ್ಳರು ಬೆಳಗಿನ ಜಾವ 2ರಿಂದ 3 ಗಂಟೆ ಅವಧಿಯಲ್ಲಿ ಮನೆಗಳ ಬಾಗಿಲು ಮುರಿದು ಒಳನುಗ್ಗಿದ್ದು ನಗರದ ಹೃದಯ ಭಾಗದಲ್ಲಿರುವ ಪಿಡಬ್ಲುೃಡಿ ಕ್ವಾಟ್ರರ್ಸ್‌ನ ಮುಖ್ಯ ರಸ್ತೆ ಪಕ್ಕದ ಮನೆಗಳೇ ಕಳ್ಳರ ಟಾರ್ಗೆಟ್ ಆಗಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಆರು ಮನೆ ಕಳ್ಳತನ, ನಾಲ್ಕು ಎಫ್‌ಐಆರ್ ?
ಆರು ಮನೆಗಳಲ್ಲಿ ಸರಣಿ ಕಳ್ಳತನವಾಗಿದ್ದು ಭಾನುವಾರದ ಸಂಜೆವರೆಗೆ ಮುರುಳೀಧರ್, ಸಂಧ್ಯಾ, ನಂದಿನಿ ಮತ್ತು ಪ್ರಕಾಶ್ ಎಂಬುವರು ಜಯನಗರ ಠಾಣೆಗೆ ದೂರು ನೀಡಿದ್ದಾರೆ. ಪ್ರಕಾಶ್ ಅವರು ಅರಸೀಕೆರೆಗೆ ಹೋಗಿದ್ದು ಮನೆಯಲ್ಲಿದ್ದ ಉಂಗುರ, ಎರಡು ಚೈನು ಹಾಗೂ 45 ಸಾವಿರ ರೂ. ನಗದು ಕಳುವಾಗಿದೆ. ಸಂಧ್ಯಾ ಅವರ ಮನೆಯಲ್ಲಿ 1.15 ಲಕ್ಷ ರೂ. ನಗದು ಕಳ್ಳತನವಾಗಿದ್ದು ಒಟ್ಟಾರೆ ಎರಡು ಲಕ್ಷ ರೂ.ಗೂ ಅಧಿಕ ನಗದು, ಮೂರು ಉಂಗುರ, ಬೆಳ್ಳಿ ಕಾಯಿನ್, 300 ಗ್ರಾಂ ಚಿನ್ನಾಭರಣ ಕಳುವಾಗಿದೆ. ಹಬ್ಬದ ಹಿನ್ನಲೆಯಲ್ಲಿ ಹಾಗೂ ಕೆಲವರು ಕೆಲಸದ ಮೇಲೆ ಊರಿಗೆ ಹೋದಾಗ ಕಳ್ಳತನ ನಡೆದಿದೆ. ಈ ನಡುವೆ ವಾರ್ತಾ ಇಲಾಖೆ ಸಹಾಯಕಿ ಭಾಗ್ಯಾ ಅವರ ಮನೆಯಲ್ಲೂ ಕಳ್ಳತನಕ್ಕೆ ಯತ್ನ ನಡೆಸಿದ್ದು ಅದೃಷ್ಟವಶಾತ್ ಚಿನ್ನಾಭರಣ ಮತ್ತು ನಗದು ಕಳ್ಳರ ಕೈಗೆ ಸಿಕ್ಕಿಲ್ಲ.