

ಶ್ರೀರಂಗಪಟ್ಟಣ : ಪಟ್ಟಣದ ಮೈಸೂರು-ಬೆಂಗಳೂರು ರಾಷ್ಟ್ರೀಯ ಹಳೆ ಹೆದ್ದಾರಿಯಲ್ಲಿ ಗೂಡ್ಸ್ ಕಂಟೇನರ್ ಬ್ರೇಕ್ ಫೇಲ್ ಆಗಿ ಸರಣಿ ಅಪಘಾತ ಸಂಭವಿಸಿದ್ದು, ಕೂದಲೆಳೆ ಅಂತರದಲ್ಲಿ ಭಾರಿ ಅನಾಹುತ ತಪ್ಪಿದೆ.
ಪಟ್ಟಣದ ರಾಜ್ಯ ಸಾರಿಗೆ ಬಸ್ ನಿಲ್ದಾಣದ ಮುಂಭಾಗದ ಜನದಟ್ಟಣೆ ಸ್ಥಳದಲ್ಲಿ ಮಂಗಳವಾರ ಮಧ್ಯಾಹ್ನ ಅವಘಡ ಸಂಭವಿಸಿದ್ದು, ಮೈಸೂರು ಕಡೆಯಿಂದ ಆಗಮಿಸಿದ ಟಿ.ವಿ.ಎಸ್ ಕಂಪನಿಗೆ ಸೇರಿದ ಗೂಡ್ಸ್ ಕಂಟೇನರ್ ಲಾರಿಯ ಬ್ರೇಕ್ ಫೇಲಾಗಿ ಏಕಾಏಕಿ ಮೊದಲು ಕಾರಿನ ಹಿಂಬದಿಗೆ ಡಿಕ್ಕಿಯಾಗಿದೆ. ಬಳಿಕ ನಿಯಂತ್ರಣಕ್ಕೆ ಸಿಗದೆ ರಾಜ್ಯ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಿಂದ ಮೈಸೂರು ಕಡೆಗೆ ತೆರಳಲು ಹೊರಬಂದ ಎರಡು ಬಸ್‌ಗಳಿಗೆ ಗುದ್ದಿದೆ. ಎರಡು ಬಸ್‌ನಲ್ಲಿದ್ದ ಪ್ರಯಾಣಿಕರು ಘಟನೆಯಿಂದ ಆತಂಕಕ್ಕೆ ಒಳಗಾಗಿದರು. ಘಟನೆಯಲ್ಲಿ ನಾಲ್ಕು ವಾಹನಗಳು ಸಹ ಜಖಂಗೊಂಡಿವೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕಂಟೇನರ್ ಲಾರಿ ಮುಂಭಾಗ ನಜ್ಜುಗುಜ್ಜಾಗಿ ಚಾಲಕ ವಿವೇಕ್ ಒಳಭಾಗದಲ್ಲಿ ಸಿಲುಕಿ ಸಣ್ಣ ಪ್ರಮಾಣದಲ್ಲಿ ಗಾಯಗೊಂಡಿದ್ದರು. ಬಳಿಕ ಸಾರ್ವಜನಿಕರ ಸಹಾಯದಿಂದ ಹೊರ ಕರೆತರಲಾಯಿತು. ಘಟನೆ ಕಂಡು ಸ್ಥಳದಲ್ಲಿ ಜನರು ಜಮಾವಣೆಗೊಂಡಿದ್ದರಿಂದ ಕೆಲ ಸಮಯ ಟ್ರಾಫಿಕ್ ಜಾಮ್ ಆಗಿತ್ತು. ಶ್ರೀರಂಗಪಟ್ಟಣ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.