

ಮಂಡ್ಯ: ಸಂವಿಧಾನದ ಆಶಯದಂತೆ ಜೀತಪದ್ಧತಿ ನಿರ್ಮೂಲನೆ ಆಗಬೇಕು ಎಂಬುದು ನಮ್ಮೆಲ್ಲರ ಆಶಯವಾಗಿದೆ. ಜಿಲ್ಲೆಯ ಜನರು ಜೀತ ಪದ್ಧತಿ ನಿರ್ಮೂಲನೆಗೆ ಕೈಜೋಡಿಸಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಮನವಿ ಮಾಡಿದರು.
ನಗರದ ಜಿಲ್ಲಾ ಪಂಚಾಯಿತಿಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಜೀತ ಪದ್ಧತಿ ನಿರ್ಮೂಲನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಜೀತ ಪದ್ಧತಿಯನ್ನು ತೊಲಗಿಸುವುದಕ್ಕೆ ಮುಖ್ಯ ಔಷಧ ಶಿಕ್ಷಣವಾಗಿದೆ. ಶಿಕ್ಷಣ ಎಲ್ಲರಿಗೂ ಎಲ್ಲೆಡೆ ಉಚಿತವಾಗಿ ದೊರೆಯುತ್ತಿದೆ. ಶಿಕ್ಷಣ ಪಡೆದು ನಾಡಿದ ಸುಶಿಕ್ಷಿತ ಪ್ರಜೆಗಳಾಗಿ ದೇಶವನ್ನು ಕಟ್ಟಬೇಕು. ಪ್ರತಿಯೊಬ್ಬ ಪ್ರಜ್ಞಾವಂತರು ಜೀತ ಪದ್ಧತಿ ನಿರ್ಮೂಲನೆಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಜೀತ ಪದ್ಧತಿ ನಿರ್ಮೂಲನಾ ದಿನಾಚರಣೆಯನ್ನು ಎಲ್ಲೆಡೆ ಆಚರಿಸುತ್ತಿದ್ದು, ಪ್ರತಿಯೊಬ್ಬ ನಾಗರಿಕರೂ ಘನತೆಯಿಂದ ಜೀವನ ನಡೆಸಬೇಕು ಎಂಬುದು ಇದರ ಉದ್ದೇಶವಾಗಿದೆ ಎಂದರು.
ಆರ್ಥಿಕ ಮತ್ತು ಅನಕ್ಷರತೆಯ ಕಾರಣದಿಂದ ಜೀತ ಪದ್ಧತಿ ಇನ್ನೂ ಅಸ್ತಿತ್ವದಲ್ಲಿದೆ. ಮೂಲಭೂತ ಹಕ್ಕುಗಳಲ್ಲಿ ಒಂದಾದ ಶಿಕ್ಷಣವನ್ನು ಪ್ರತಿಯೊಬ್ಬರೂ ಪಡೆದುಕೊಂಡು, ಜೀತ ಪದ್ಧತಿಯನ್ನು ನಿರ್ಮೂಲನೆಗೊಳಿಸಬೇಕು. ಎಲ್ಲ ಇಲಾಖೆಯ ಅಧಿಕಾರಿಗಳು ಜೀತ ಪದ್ಧತಿ ನಿರ್ಮೂಲನೆಗಾಗಿ ಜನಜಾಗೃತಿ ಮೂಡಿಸಬೇಕು. ಜತೆಗೆ ಜಿಲ್ಲೆಯನ್ನು ಜೀತ ಮುಕ್ತ ಜಿಲ್ಲೆಯನ್ನಾಗಿಸಬೇಕು ಎಂದರು.
ಜೀತ ಪದ್ಧತಿಯ ಕೆಲವೇ ಸಣ್ಣ ಪ್ರಮಾಣದ ಪ್ರಕರಣಗಳು ಬೆಳಕಿಗೆ ಬಂದಿವೆ. ದೊಡ್ಡ ಪ್ರಮಾಣದ ಪ್ರಕರಣಗಳು ಯಾರ ಕಣ್ಣಿಗೂ ಕಾಣದೆ ಹಾಗೆ ಉಳಿಯುತ್ತಿದೆ. ಇದರ ಬಗ್ಗೆ ಜನರು ಎಚ್ಚೆತ್ತು ಕೊಂಡು ಜೀತ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಪಣತೊಡಬೇಕಿದೆ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖ್ ತನ್ವಿರ್ ಆಸಿಫ್ ಅವರು ಜೀತ ಪದ್ಧತಿ ನಿರ್ಮೂಲನೆಗೆ ಪ್ರಮಾಣ ವಚನ ಬೋಧಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶರಾದ ವಾಣಿ ಎ.ಶೆಟ್ಟಿ ಮಾತನಾಡಿ, ಜೀತಕ್ಕಾಗಿ ಯಾವುದೇ ವ್ಯಕ್ತಿಯನ್ನು ದುಡಿಸಿಕೊಳ್ಳುವುದು ಅಮಾನವೀಯ ಕೃತ್ಯ. ಒತ್ತಾಯ ಪೂರ್ವಕವಾಗಿ ಜೀತಕ್ಕಾಗಿ ವ್ಯಕ್ತಿಯನ್ನು ಬಳಸಿಕೊಳ್ಳುವುದು ಕಾನೂನಿನಡಿ ಅಪರಾಧವಾಗಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರು ಸಂಜೀವಪ್ಪ, ಉಪ ಕಾರ್ಯದರ್ಶಿ ಆನಂದ್, ಸಮಾಜ ಕಲ್ಯಾಣಾಧಿಕಾರಿ ಸಿದ್ದಲಿಂಗೇಶ್ ಇದ್ದರು.