ಪ್ರವಚನ ಶ್ರವಣದಿಂದ ನೆಮ್ಮದಿ ಪ್ರಾಪ್ತಿ

GJD PURANA
Published on

ಗಜೇಂದ್ರಗಡ: ಶ್ರಾವಣ ಮಾಸ ಭಕ್ತಿ ವೈಭವದ ಪ್ರತೀಕವಾಗಿದೆ. ಸತ್ಕಾರ್ಯ ಮಾಡುವುದರೊಂದಿಗೆ ಪ್ರಸನ್ನಚಿತ್ತದ ಭಕ್ತಿಯ ಮಾತುಗಳು, ಮಹಾತ್ಮರ ಪುರಾಣ, ಪ್ರವಚನವನ್ನು ಶ್ರವಣ ಮಾಡುವುದರಿಂದ ಮನಸಿಗೆ ನೆಮ್ಮದಿ ಪ್ರಾಪ್ತಿಯಾಗಲಿದೆ ಎಂದು ವಿಜಯಮಹಾಂತ ಸ್ವಾಮೀಜಿ ಹೇಳಿದರು.

ಶ್ರಾವಣ ಮಾಸ ಪ್ರಯುಕ್ತ ಪಟ್ಟಣದ ಮೈಸೂರ ಮಠದಲ್ಲಿ ಗಜೇಂದ್ರಗಡ-ಉಣಚಗೇರಿ ವೀರಶೈವ ಲಿಂಗಾಯತ ಸಮಾಜ ವತಿಯಿಂದ ಗುರುವಾರದಿಂದ ಒಂದು ತಿಂಗಳವರೆಗೆ ನಡೆಯುವ ಮಹಾ ದಾಸೋಹಮೂರ್ತಿ ಬರಗಾಲದ ಬಂಟ ಕಲಬುರಗಿ ಶಿವಶರಣ ಶ್ರೀ ಶರಣಬಸವೇಶ್ವರ ಪುರಾಣ ಪ್ರಾರಂಭೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಒತ್ತಡದ ಬದುಕಿನಲ್ಲಿ ಜನರು ಧರ್ಮ, ಕಾರ್ಯ ಕಡಿಮೆ ಮಾಡುತ್ತಿದ್ದಾರೆ. ಇದರಿಂದ ನೆಮ್ಮದಿ ಕಡಿಮೆಯಾಗುತ್ತಿದೆ. ಪುರಾಣ ಕೇಳಲು ಸಮಯ ಮೀಸಲಿಡಿ. ನಿತ್ಯ ನಡೆಯುವ ಪುರಾಣ ಕೇಳುವುದರಿಂದ ವರ್ಷಪೂರ್ತಿ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಸಿಗಲಿವೆ. ಪುರಾಣದಲ್ಲಿ ಬರುವ ಸನ್ನಿವೇಶಗಳು ಎಲ್ಲರ ಬದುಕಿನಲ್ಲಿ ನಿತ್ಯ ಎದುರಾಗಲಿವೆ. ಭಕ್ತಿ ಮಾರ್ಗದ ಮೂಲಕ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ ಎಂದರು.

ಸಮಾಜದ ಅಧ್ಯಕ್ಷ ಸಿದ್ದಪ್ಪ ಬಂಡಿ ಮಾತನಾಡಿ, ಪುರಾಣ, ಪ್ರವಚನಗಳನ್ನು ಕೇಳುವುದರಿಂದ ಬದುಕು ಹಸನಾಗುತ್ತದೆ. ಅಲ್ಲದೆ, ತತ್ವ, ಆದರ್ಶ ಬದುಕು ರೂಪಿಸುತ್ತವೆ. ಶ್ರೀಮಠದಲ್ಲಿ ಒಂದು ತಿಂಗಳು ಕಾಲ ಜರುಗುವ ಪುರಾಣ, ಪ್ರವಚನಗಳ ಸಾರವನ್ನು ಪ್ರತಿಯೊಬ್ಬರೂ ಚಾಚು ತಪ್ಪದೆ ಜೀವನದಲ್ಲಿ ಅಳವಡಿಕೊಳ್ಳಬೇಕು ಎಂದರು.

ಪುರಾಣ ಉದ್ಘಾಟನೆಗೂ ಮುನ್ನ ಷಟಸ್ಥಳ ಧ್ವಜಾರೋಹಣವನ್ನು ಸಿದ್ದಪ್ಪ ಬಂಡಿ ನೆರವೇರಿಸಿದರು. ಪುರಾಣ ಸಮಿತಿ ಅಧ್ಯಕ್ಷ ಶಿವಕುಮಾರ ಕೋರಧಾನ್ಯಮಠ, ಸಮಾಜದ ಯುವ ಘಟಕದ ಅಧ್ಯಕ್ಷ ಅಪ್ಪು ಮತ್ತಿಕಟ್ಟಿ, ಎಸ್.ಎಸ್. ವಾಲಿ, ಪ್ರಭು ಚವಡಿ, ಎ.ಪಿ. ಗಾಣಿಗೇರ, ಶರಣಪ್ಪ ರೇವಡಿ, ಬಸವರಾಜ ಕೊಟಗಿ, ನಾಗಯ್ಯ ಗೊಂಗಡಶೆಟ್ಟಿಮಠ, ಟಿ.ಎಸ್. ರಾಜೂರ, ಶಿವಯ್ಯ ಚಕ್ಕಡಿಮಠ, ಅಮರಯ್ಯ ಗೌರಿಮಠ, ಬಸವರಾಜ ರೇವಡಿ, ಪ್ರಕಾಶ ಕಾರಡಗಿಮಠ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net