ಜು.11ರಂದು ‘ಸೆಪ್ಟಂಬರ್ 10’ ಸಿನಿಮಾ ತೆರೆಗೆ: ನಿರ್ದೇಶಕ ಓಂ ಸಾಯಿಪ್ರಕಾಶ್ ಮಾಹಿತಿ

September 10th film team press conference Mandya
Published on

ಮಂಡ್ಯ: ಯಾವುದೇ ಸಮಸ್ಯೆಗೆ ಆತ್ಮಹತ್ಯೆಯೊಂದೇ ಪರಿಹಾರವಲ್ಲವೆಂಬ ಧ್ಯೇಯದೊಂದಿಗೆ ‘ಸೆಪ್ಟೆಂಬರ್ 10’ ಶೀರ್ಷಿಕೆಯೊಂದಿಗೆ ಚಲನಚಿತ್ರ ನಿರ್ಮಿಸಲಾಗಿದ್ದು, ಜು.11ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಖ್ಯಾತ ನಿರ್ದೇಶಕ ಓಂ ಸಾಯಿಪ್ರಕಾಶ್ ತಿಳಿಸಿದರು.

ತವರಿಗೆ ಬಾ ತಂಗಿ, ಮುದ್ದಿನ ಮಾವ, ಅಣ್ಣ ತಂಗಿ, ಸೋಲಿಲ್ಲದ ಸರದಾರದಂತಹ ಯಶಸ್ವಿ ಚಲನಚಿತ್ರಗಳ ನಿರ್ದೇಶನ ಮಾಡಿದ್ದೇನೆ. ಅದೇ ರೀತಿ ‘ಸೆಪ್ಟೆಂಬರ್ 10’ ನನ್ನ 105ನೇ ಚಲನಚಿತ್ರವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸೆಪ್ಟೆಂಬರ್ 10 ರೈತ ಆತ್ಮಹತ್ಯೆ ತಡೆ ದಿನ. ಈ ಹಿನ್ನೆಲೆಯಲ್ಲಿ ಆತ್ಮಹತ್ಯೆಯನ್ನೇ ಮೂಲವನ್ನಾಗಿಸಿಕೊಂಡು ಚಲನಚಿತ್ರ ನಿರ್ಮಿಸಲಾಗಿದೆ. ದುರ್ಬಲ ಹಾಗೂ ಸಂಕುಚಿತ ಮನಸ್ಸಿನವರಿಗೆ ಉತ್ತಮ ಸಂದೇಶ, ಮಾರ್ಗದರ್ಶನ ನೀಡುವ ಪ್ರಯತ್ನ ಚಿತ್ರದಲ್ಲಿದೆ. ಬೆಳೆ ನಷ್ಟ, ಸಾಲದ ಸುಳಿಗೆ ಸಿಲುಕಿದ ರೈತ, ಪ್ರೇಮಿಗಳು, ವ್ಯಾಪಾರಿಗಳು, ಪರೀಕ್ಷೆ ಎದುರಿಸಲಾಗದ ಹಾಗೂ ಕಡಿಮೆ ಅಂಕಗಳಿಸಿದ ವಿದ್ಯಾರ್ಥಿಗಳ ಆತ್ಮಹತ್ಯೆಯ ಸತ್ಯ ದರ್ಶನವನ್ನು ಚಿತ್ರದ ಮೂಲಕ ತೋರ್ಪಡಿಸಲಾಗುತ್ತಿದೆ ಎಂದು ಹೇಳಿದರು.

ಚಿತ್ರೀಕರಣವನ್ನು ಬೆಂಗಳೂರಿನಲ್ಲೇ ಮಾಡಲಾಗಿದ್ದು, 60 ಲಕ್ಷ ರೂ.ಗಳನ್ನು ವ್ಯಯಿಸಲಾಗಿದೆ. 2020ರಲ್ಲೇ ಚಲನಚಿತ್ರ ಪ್ರಾರಂಭಿಸಿ ಮುಗಿಸುವಷ್ಟರಲ್ಲಿ ಕರೊನಾದಿಂದಾಗಿ ಬಿಡುಗಡೆ ಮಾಡಲಾಗಿರಲಿಲ್ಲ. ಚಿತ್ರಕ್ಕೆ ಡಾ.ವಿ.ನಾಗೇಂದ್ರ ಪ್ರಸಾದ್ ಅವರ ಸಂಗೀತ, ಜೆ.ಜಿ.ಕೃಷ್ಣ ಛಾಯಾಗ್ರಹಣ, ಬಿ.ಎ.ಮಧು ಅವರ ಸಂಭಾಷಣೆಯಿದೆ. ಚಲನಚಿತ್ರಕ್ಕೆ ಬೆನ್ನೆಲುಬಾಗಿ ನಿಂತ ಬಿಬಿಎಂಪಿ ಮಾಜಿ ಸದಸ್ಯ ಡಾ.ರಾಜು ಅವರ ಸಹಕಾರದಿಂದ ಬಿಡುಗಡೆಯಾಗುತ್ತಿದ್ದು, ಚಲನಚಿತ್ರ ಪ್ರಿಯರು ವೀಕ್ಷಿಸಿ ಪ್ರೋತ್ಸಾಹಿಸುವಂತೆ ಮನವಿ ಮಾಡಿದರು.

ಸಹ ನಿರ್ದೇಶಕ ಶಶಿಕಿರಣ್, ಹಿರಿಯ ನಟ ಮೀಸೆ ಆಂಜನಪ್ಪ (ಶಂಖನಾದ ಆಂಜಿನಪ್ಪ), ನಟರಾದ ತುಳಸಿ, ಜಯಸಿಂಹ, ಪತ್ರಕರ್ತ ಹಲ್ಲೆಗೆರೆ ಗುರುಸ್ವಾಮಿ, ಜಯರಾಂ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net