ಕಸ ಪ್ರತ್ಯೇಕಿಸಿದರಷ್ಟೇ ಸಂಗ್ರಹ :ಬೆಳ್ತಂಗಡಿ ನಗರ ಪಂಚಾಯಿತಿ ಯೋಜನೆ

Belthangady waste managment
Published on

ಮನೋಹರ್ ಬಳಂಜ ಬೆಳ್ತಂಗಡಿ

ಕಸ ಸಂಗ್ರಹಕ್ಕೆ ನಗರ ಪಂಚಾಯಿತಿ ವಿವಿಧ ಯೋಜನೆ ರೂಪಿಸಿದರೂ ಅದರ ವಿಲೇವಾರಿ ದೊಡ್ಡ ಸವಾಲಾಗಿತ್ತು. ಈಗ ನಗರ ಸುಂದರೀಕರಣ ಹೆಚ್ಚಿಸಲು ನಪಂ ಮುಂದಾಗಿದ್ದು ಇದಕ್ಕಾಗಿ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲು ಮುಂದಾಗಿದೆ. ಮೊದಲನೇ ಹೆಜ್ಜೆಯಾಗಿ ಹಸಿಕಸ, ಒಣಕಸ ವಿಂಗಡಿಸಿದರೆ ಮಾತ್ರ ಕಸ ಸಂಗ್ರಹ ಎಂಬ ಎಚ್ಚರಿಕೆ ನೀಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ.

ಜಿಲ್ಲೆಯಲ್ಲೇ ಬೆಳ್ತಂಗಡಿ ಅತೀ ದೊಡ್ಡ ತಾಲೂಕಾಗಿದ್ದು, ತಾಲೂಕಿನ ಕೇಂದ್ರ ಭಾಗವಾಗಿ ಬೆಳ್ತಂಗಡಿ ನಪಂ ವ್ಯಾಪ್ತಿ ಇದೆ. ಬಹುತೇಕ ಸರ್ಕಾರಿ ಕಚೇರಿಗಳು ನಗರ ವ್ಯಾಪ್ತಿಯಲ್ಲಿದ್ದು ದಿನನಿತ್ಯ ಅತ್ಯಧಿಕ ಜನಸಂಚಾರವಿರುವ ಪ್ರದೇಶವಾಗಿದೆ. ಇಲ್ಲಿ ಹೋಟೆಲ್ ಇನ್ನಿತರ ಮಳಿಗೆಗಳು ಹೆಚ್ಚಾಗಿರುವುದರ ಜತೆಗೆ ಸರ್ಕಾರಿ ವಸತಿ ಗೃಹಗಳು, ಸಂತೆ ಮಾರುಕಟ್ಟೆ, ಮನೆ ನಿವೇಶನಗಳು ಇರುವುದರಿಂದ ತ್ಯಾಜ್ಯ ಉತ್ಪತ್ತಿಯಾಗುವ ಪ್ರಮುಖ ಪ್ರದೇಶವಾಗಿದೆ.

ವಿಲೇವಾರಿ ಸವಾಲು: ತ್ಯಾಜ್ಯ ಸಂಗ್ರಹಕ್ಕೆ ಕಾರ್ಮಿಕರ ಕೊರತೆ, ವಿಲೇವಾರಿಗೆ ಅನುದಾನದ ಕೊರತೆ ಎದುರಿಸುತ್ತಿರುವ ನಪಂ ಅರಳಿ ಸಮೀಪವಿರುವ ದೊಡ್ಡ ತ್ಯಾಜ್ಯ ಸಂಗ್ರಹಣಾ ಘಟಕಕ್ಕೆ ತ್ಯಾಜ್ಯ ವಿಲೇಮಾಡುತ್ತಿದೆ. ಈಗ ಇದಕ್ಕೆ ಹೊಸ ರೂಪ ಕೊಡಲು ನಪಂ ಮುಂದಾಗಿದೆ. ತ್ಯಾಜ್ಯ ವಿಲೇವಾರಿ, ನಗರ ಸೌಂದರೀಕರಣ, ಪಾರ್ಕ್‌ಗಳ ನಿರ್ಮಾಣಕ್ಕೆ ವಿಶೇಷ ಅನುದಾನವಾಗಿ ಒಂದು ಕೋಟಿ ರೂ. ಮಂಜೂರಾಗಿದ್ದು, ಇದನ್ನು ಸಮರ್ಪಕವಾಗಿ ಬಳಸಲು ವಿವಿಧ ಯೋಜನೆಗಳನ್ನು ರೂಪಿಸುತ್ತಿದೆ.

ಮಾಹಿತಿ ಕಾರ್ಯಾಗಾರ: ನಗರದಲ್ಲಿ ಪ್ರತಿನಿತ್ಯ 2,200 ಮನೆಗಳಿಂದ ಕಸ ಸಂಗ್ರಹವಾದರೆ, ಒಂದು ಸಾವಿರದಷ್ಟು ವಾಣಿಜ್ಯ ಮಳಿಗೆಗಳಿಂದ ಹಾಗೂ 250ಕ್ಕೂ ಅಧಿಕ ನಗರ ವ್ಯಾಪ್ತಿಯ ದೂರವಿರುವ ಮನೆಗಳಿಂದ ವಾರಕ್ಕೊಮ್ಮೆ ಕಸ ಸಂಗ್ರಹ ಮಾಡಲಾಗುತ್ತಿದೆ. ಇಲ್ಲಿಗೆ ಪ್ರತೀ ವಾರ್ಡ್‌ಗಳಲ್ಲಿ ಮನೆ ಮನೆಗೆ ಕಸ ವಿಲೇ ಜಾಗೃತಿ ಸ್ಟಿಕ್ಕರ್ ಅಳವಡಿಸುವುದು, ಕಲ್ಯಾಣ ಮಂಟಪಗಳಲ್ಲಿ ಕಡಿಮೆ ತ್ಯಾಜ್ಯಗಳು ಇರುವಂತೆ ನೋಡಿಕೊಳ್ಳುವ ಕುರಿತು ಮಾಹಿತಿ, ಶಾಲಾ ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮವನ್ನು ನಪಂ ಹಮ್ಮಿಕೊಂಡಿದೆ.

ಸಿಬ್ಬಂದಿಯಿಂದ ಜಾಗೃತಿ: ಹಸಿಕಸ, ಒಣಕಸ ವಿಂಗಡಣೆೆಗೆ ನ.ಪಂ ಎಲ್ಲ ಸಿಬ್ಬಂದಿ ವಾರದ ಒಂದು ದಿನ ಸಮವಸ್ತ್ರ ಬಳಸುವ ಮೂಲಕ ಜಾಗೃತಿ ಮೂಡಿಸಿ ಮಾದರಿಯಾಗಿದ್ದಾರೆ. ಹಸಿರು ಬಣ್ಣದ ಸಮವಸ್ತ್ರ ಧರಿಸುವ ಮೂಲಕ ಹಸಿ ಕಸ ಸಂಗ್ರಹ, ನೀಲಿ ಬಣ್ಣದ ಸಮವಸ್ತ್ರ ಧರಿಸುವ ಮೂಲಕ ಒಣ ಕಸ ಸಂಗ್ರಹ ಎಂಬ ಜಾಗೃತಿ ಮೂಡಿಸುತ್ತಿದ್ದಾರೆ.

ಸಾರ್ವಜನಿಕ ತೊಟ್ಟಿ ನಿಷೇಧ: ನಗರದ ಪ್ರಮುಖ ರಸ್ತೆಗಳ ಬದಿಗಳಲ್ಲಿ ಸಾರ್ವಜನಿಕ ತೊಟ್ಟಿಗಳನ್ನು ಕಸ ಸಂಗ್ರಹಣೆಗಾಗಿ ಇಡಲಾಗಿತ್ತು. ಇದರಿಂದ ಸಮಸ್ಯೆಗಳು ಎದುರಿಸುವಂತಾಗಿದೆ. ಹೊರಗಿನ ಭಾಗದಿಂದ ಕಸ ತಂದು ಹಾಕುವುದು, ಬೀದಿ ನಾಯಿಗಳ ಹಾವಳಿ, ಹಸಿಕಸ, ಒಣಕಸವನ್ನು ಒಟ್ಟಾಗಿ ಹಾಕುವುದು ಈ ಎಲ್ಲ ಸಮಸ್ಯೆಗಳಿಂದ ಮುಕ್ತವಾಗಲು ಸಾರ್ವಜನಿಕ ತೊಟ್ಟಿಗಳನ್ನು ನಿಷೇಧಿಸಲಾಗಿದೆ. ವಾಹನ ಮೂಲಕ ಮಾತ್ರ ಕಸ ಸಂಗ್ರಹಿಸಲಾಗುತ್ತಿದೆ.

ನಗರದ ತ್ಯಾಜ್ಯ ಸಂಗ್ರಹಣೆಗೆ ಪ್ರಮುಖ ಆದ್ಯತೆ ನೀಡಲಾಗುತ್ತಿದ್ದು, ಇದಕ್ಕೆ ಎಲ್ಲ ಸದಸ್ಯರು ಅಧಿಕಾರಿಗಳೊಂದಿಗೆ ಸಹಕರಿಸುತ್ತಿದ್ದಾರೆ. ಸರ್ಕಾರ ಇದಕ್ಕೆ ಅನುದಾನ ನೀಡಿದ್ದು, ತ್ಯಾಜ್ಯ ಘಟಕಕ್ಕೆ ಶಾಸಕ ಹರೀಶ್ ಪೂಂಜರವರ ಮುತುವರ್ಜಿಯಿಂದ ಕೇಂದ್ರ ಸರ್ಕಾರದಿಂದ ಅಮೃತ ನಿರ್ಮಲ ನಗರ ಯೋಜನೆಯಡಿ ಒಂದು ಕೋಟಿ ರೂ. ಮಂಜೂರಾಗಿದೆ. ಇದನ್ನು ಸಮರ್ಪಕವಾಗಿ ಬಳಸಿ ತ್ಯಾಜ್ಯ ವಿಲೇವಾರಿಯಲ್ಲಿ ಮಾದರಿ ನಗರ ಪಂಚಾಯಿತಿಯನ್ನಾಗಿ ರೂಪಿಸಲು ಚಿಂತಿಸಲಾಗಿದೆ.

-ಜಯಾನಂದ್ ಗೌಡ ಬೆಳ್ತಂಗಡಿ ನಪಂ ಉಪಾಧ್ಯಕ್ಷ

ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿಗೆ ಇನ್ನಷ್ಟು ವೇಗ ನೀಡುವ ಕಾರ್ಯ ಮಾಡಲಾಗುತ್ತಿದ್ದು, ತ್ಯಾಜ್ಯ ಸಂಗ್ರಹಣೆಗೆ ಮೂರು ಸಂಸ್ಥೆಗಳು ಈಗಾಗಲೇ ಭೇಟಿಯಾಗಿವೆ. ಇದರಲ್ಲಿ ಸೂಕ್ತ ಯಾವುದು ಎಂದು ನಿರ್ಣಯಿಸಿ ಆ ಸಂಸ್ಥೆಗಳಿಗೆ ತ್ಯಾಜ್ಯ ವಿಲೇವಾರಿ ಜವಾಬ್ದಾರಿ ನೀಡಲಾಗುತ್ತದೆ.

-ಸುಧಾಕರ್, ಬೆಳ್ತಂಗಡಿ ನಗರ ಪಂಚಾಯಿತಿ ಮುಖ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net