ಒಂದೇ ಆಸ್ತಿಗೆ ಪ್ರತ್ಯೇಕ ಮೊತ್ತದ ತೆರಿಗೆ ಚಲನ್ !

New hdmc new
Published on

ಹುಬ್ಬಳ್ಳಿ : ನಿಗದಿತ ಆಸ್ತಿವೊಂದರ ಪಿಐಡಿ ನಂಬರ್​ಗೆ ಬೇರೆ ಬೇರೆ ತೆರಿಗೆ ಚಲನ್​ಗಳನ್ನು ನೀಡಿದ್ದಲ್ಲದೆ, ಆನ್​ಲೈನ್ ಹಾಗೂ ಖುದ್ದಾಗಿ ತೆರಿಗೆ ಪಾವತಿಸುವರಿಗೂ ಪ್ರತ್ಯೇಕ ಮೊತ್ತದ ತೆರಿಗೆ ಚಲನ್​ಗಳನ್ನು ನೀಡುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ನಾಗರಿಕರಲ್ಲಿ ಗೊಂದಲ ಮೂಡಿಸಿದೆ.

ಪ್ರಾಮಾಣಿಕವಾಗಿ ತೆರಿಗೆ ಹಣ ಪಾವತಿಸಬೇಕೆನ್ನುವವರಿಗೂ ಮಹಾನಗರ ಪಾಲಿಕೆ ಅಧಿಕಾರಿಗಳು ಅವೈಜ್ಞಾನಿಕವಾಗಿ ಚಲನ್​ಗಳನ್ನು ನೀಡುತ್ತಿರುವುದು ಬೆಳಕಿಗೆ ಬಂದಿದೆ. ಅದೂ, ಒಂದೇ ದಿನದಲ್ಲಿ ಒಂದೇ ಪಿಐಡಿ ಸಂಖ್ಯೆಗೆ ಬೇರೆ ಬೇರೆ ಮೊತ್ತದ ತೆರಿಗೆ ಹಣದ ಚಲನ್​ಗಳನ್ನು ನೀಡುವ ಮೂಲಕ ಪಾಲಿಕೆ ಸಿಬ್ಬಂದಿ ಬೇಜವಾಬ್ದಾರಿತನ ತೋರಿದ್ದಾರೆ.

ಯಾವುದೇ ವಲಯ ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್​ಗಳು ನಿಗದಿತ ಪಿಐಡಿ ಸಂಖ್ಯೆಯನ್ನು ನಮೂದು ಮಾಡಿದರೆ ಸಾಕು, ಆ ಆಸ್ತಿಯ ಪಿಐಡಿ ಸಂಖ್ಯೆಗೆ ನಿಗದಿತಗೊಂಡಿರುವ ಮೊತ್ತದ ತೆರಿಗೆ ಚಲನ್ ಬರುತ್ತದೆ. ಆದರೆ, ಒಂದು ಪಿಐಡಿ ಸಂಖ್ಯೆಯ ಚಲನ್​ಗಳನ್ನು ಬೇರೆ ಬೇರೆ ಅವಧಿಯಲ್ಲಿ ಪಡೆದರೆ, ಪ್ರತ್ಯೇಕ ತೆರಿಗೆ ಮೊತ್ತದ ಚಲನ್​ಗಳನ್ನು ಪಾಲಿಕೆ ಸಿಬ್ಬಂದಿ ನೀಡಿದ್ದಾರೆ. ಈ ರೀತಿಯ ಬೇಜವಾಬ್ದಾರಿ ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಆನ್​ಲೈನ್ ಮೂಲಕ ತೆರಿಗೆ ಪಾವತಿಸುವ ನಾಗರಿಕರೂ ಪಾಲಿಕೆ ಬೇಜವಾಬ್ದಾರಿತನದ ಪರಿಣಾಮ ಎದುರಿಸುತ್ತಿದ್ದಾರೆ. ಆನ್​ಲೈನ್​ನಲ್ಲಿ ನಿಗದಿತ ಆಸ್ತಿಯ ಪಿಐಡಿ ಸಂಖ್ಯೆಗೆ ಒಂದು ಮೊತ್ತದ ತೆರಿಗೆ ಕಾಣಿಸಿದರೆ, ಅದೇ ಪಿಐಡಿ ಸಂಖ್ಯೆಗೆ ಪಾಲಿಕೆ ವಲಯ ಕಚೇರಿಯಲ್ಲಿ ಬೇರೆಯದ್ದೇ ತೆರಿಗೆ ಮೊತ್ತ ತೋರಿಸಲಾಗುತ್ತಿದೆ.

ವಲಯ ಕಚೇರಿಯಲ್ಲಿ ನೀಡುವ ತೆರಿಗೆ ಮೊತ್ತದ ಚಲನ್​ಗೂ, ಆನ್​ಲೈನ್​ನಲ್ಲಿ ಕಾಣಿಸುವ ತೆರಿಗೆ ಮೊತ್ತದ ಚಲನ್​ಗಳಿಗೂ ಅಜಗಜಾಂತರ ವ್ಯತ್ಯಾಸ ಕಾಣಿಸುತ್ತಿದೆ. ಒಂದು ವೇಳೆ ನಾಗರಿಕರು ಆನ್​ಲೈನ್​ನಲ್ಲಿ ಕಾಣಿಸುವ ಪಿಐಡಿ ಸಂಖ್ಯೆಯ ಕಡಿಮೆ ಮೊತ್ತದ ತೆರಿಗೆಯನ್ನು ಪಾವತಿಸಿದರೆ, ಕಡಿಮೆ ತೆರಿಗೆ ಪಾವತಿಸಿದ್ದಕ್ಕೆ ಭವಿಷ್ಯದಲ್ಲಿ ನಾಗರಿಕರು ದಂಡ ತುಂಬಬೇಕಾಗುತ್ತದೆ ಎನ್ನುವ ಭಯ. ಒಂದು ವೇಳೆ ಹೆಚ್ಚಿನ ತೆರಿಗೆ ಪಾವತಿಸಿದ್ದರೆ, ಮುಂದಿನ ವರ್ಷದ ತೆರಿಗೆ ಹಣಕ್ಕೆ ಹೊಂದಾಣಿಕೆಯಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net