

ಕಾರವಾರ: ಕರ್ನಾಟಕದ ಕರಾವಳಿಯ 3 ಜಿಲ್ಲೆಗಳ ಪ್ರವಾಸೋದ್ಯಮ (Costal tourism) ಅಭಿವೃದ್ಧಿಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿಯನ್ನು ಶೀಘ್ರ ಜಾರಿಗೆ ತರಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ಭಟ್ಕಳ ತಾಲೂಕಿನ ಮುರ್ಡೇಶ್ವರದಿಂದ ಸುಮಾರು 22 ಕಿಮೀ ದೂರದಲ್ಲಿರುವ ನೇತ್ರಾಣಿ ದ್ವೀಪದ ಸಮೀಪ ಅರಬ್ಬಿ ಸಮುದ್ರದಲ್ಲಿ ಕುಟುಂಬ ಸಮೇತ ತೆರಳಿದ ಅವರು, ಜಲ ಸಾಹಸ ಕ್ರೀಡೆಗಳನ್ನು ವೀಕ್ಷಿಸಿದರು. ನಂತರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಪ್ರಕೃತಿ ಸಂಪತ್ತು ಯಾವ ಜಿಲ್ಲೆಗೇನೂ ಕಡಿಮೆ ಇಲ್ಲ. ಇದನ್ನು ಅನ್ವೇಷಿಸಲು ಸಹಕಾರಿಯಾಗಬೇಕು. ಈ ನಿಟ್ಟಿನಲ್ಲಿ ಕರಾವಳಿಗೆ ಕರಾವಳಿಗೆ ಪ್ರವಾಸೋದ್ಯಮವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಸುವ ಸಂಬಂಧ ಇಲ್ಲಿ ಜಾಸ್ತಿ ಹೂಡಿಕೆದಾರರನ್ನು ಸೆಳೆಯಲು ಏನೇನು ಮಾಡಬಹುದು ಎಂದು ಯೋಜನೆ ರೂಪಿಸಿದ್ದೇವೆ.
ಕರಾವಳಿಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ (costal tourism rolls) ರೂಪಿಸುವ ಸಂಬಂಧ ಎಲ್ಲ ಜಿಲ್ಲಾಧಿಕಾರಿಗಳಿಂದ ಸಲಹೆಗಳನ್ನು ಪಡೆಯಲಾಗಿದೆ. ಸಚಿವ ಸಂಪುಟ ಸಭೆಯಲ್ಲೂ ಒಮ್ಮೆ ಚರ್ಚೆ ನಡೆದಿದೆ. ಅದಕ್ಕೆ ಕೆಲವು ಬದಲಾವಣೆಗಳನ್ನು ಮಾಡಿ ಶೀಘ್ರ ಜಾರಿಗೆ ತರಲಾಗುವುದು. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಯಮ್ಮ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಅವರ ಜೆತೆ ಚರ್ಚಿಸಲಾಗಿದೆ ಎಂದರು.
ನಾನು 15-20 ವರ್ಷಗಳ ಹಿಂದೆ ಬ್ಯಾಂಕಾಕ್ ದೇಶಕ್ಕೆ ಹೋಗಿದ್ದ ವೇಳೆ ಗಮನಿಸಿದಂತೆ ಅಲ್ಲಿನ ಯುವಕರಿಗಿಂತ ನಮ್ಮ ಕರಾವಳಿಯ ಹುಡುಗರು ಹೆಚ್ಚು ಕ್ರಿಯಾಶೀಲವಾಗಿದ್ದಾರೆ. ಅವರಿಗೆ ಇಲ್ಲಿಗೆ ಉದ್ಯೋಗ ಕಲ್ಪಿಸಲು ಕ್ರಮ ವಹಿಸಲಾಗುವುದು ಎಂದರು.