ಪ್ರತ್ಯೇಕ ರಸ್ತೆ ಅಪಘಾತ, ಟೆಕ್ಕಿ ಸೇರಿ ಇಬ್ಬರ ಸಾವು

accident-15
Published on

ಬೆಂಗಳೂರು: ಎರಡು ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಟೆಕ್ಕಿ ಸೇರಿ ಇಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.
ಟೈಯರ್ ಪಂಕ್ಚರ್ ಆಗಿ ರಸ್ತೆ ಬದಿ ನಿಂತಿದ್ದ ಗೂಡ್ಸ್ ಕ್ಯಾಂಟರ್‌ಗೆ ಹಿಂದಿನಿಂದ ಸೈಕಲ್‌ನಲ್ಲಿ ಬಂದು ಡಿಕ್ಕಿ ಹೊಡೆದುಕೊಂಡ ಪರಿಣಾಮ ಟೆಕ್ಕಿ ಮೃತಪಟ್ಟಿರುವ ಘಟನೆ ಕೆ.ಜಿ.ಹಳ್ಳಿ ಸಮೀಪ ನಡೆದಿದೆ.


ಎಚ್‌ಬಿಆರ್ ಲೇಔಟ್ ನಿವಾಸಿ ರಾಮಕೃಷ್ಣನ್(೫೧) ಮೃತ ಟೆಕ್ಕಿ. ಖಾಸಗಿ ಕಂಪನಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ರಾಮಕೃಷ್ಣನ್‌ಗೆ ನಿತ್ಯ ಸೈಕಲಿಂಗ್ ಮಾಡುವುದು ಹವ್ಯಾಸ ಇತ್ತು. ಹೀಗಾಗಿ ಬುಧವಾರ ಮುಂಜಾನೆ ೫.೩೦ರ ಸುಮಾರಿಗೆ ಸೈಕಲಿಂಗ್ ಮಾಡಿಕೊಂಡು ಹೆಣ್ಣೂರು-ನಾಗವಾರ ರಸ್ತೆಯಲ್ಲಿ ಹೋಗುತ್ತಿದ್ದರು. ಇದೇ ವೇಳೆ ಟೈಯರ್ ಪಂಕ್ಚರ್ ಆಗಿ ಗೂಡ್ಸ್ ಕ್ಯಾಂಟರ್ ರಸ್ತೆ ಬದಿ ನಿಂತಿತ್ತು. ಆದರೆ, ಚಾಲಕ ಯಾವುದೇ ಸಿಗ್ನಲ್ ಲೈಟ್ ಹಾಕಿರಲಿಲ್ಲ.


ಮತ್ತೊಂದೆಡೆ ಸೈಕಲ್‌ನಲ್ಲಿ ಅತೀವೇಗವಾಗಿ ಬಂದ ರಾಮಕೃಷ್ಣನ್ ನಿಯಂತ್ರಿಸಲು ಸಾಧ್ಯವಾಗದೆ ಕ್ಯಾಂಟರ್‌ನ ಹಿಂಭಾಗಕ್ಕೆ ಡಿಕ್ಕಿ ಹೊಡೆದುಕೊಂಡಿದ್ದಾರೆ. ಪರಿಣಾಮ ಅವರ ಮುಖಕ್ಕೆ ಬಲವಾಗಿ ಪೆಟ್ಟು ಬಿದ್ದಿತ್ತು. ಕೂಡಲೇ ಕ್ಯಾಂಟರ್ ಚಾಲಕ ಆಂಬ್ಯುಲೆನ್ಸ್ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಬಳಿಕ ಸ್ಥಳೀಯರು ಆಂಬ್ಯುಲೆನ್ಸ್‌ನಲ್ಲಿ ರಾಮಕೃಷ್ಣನ್ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಪರೀಕ್ಷಿಸಿದ ವೈದ್ಯರು ಮಾರ್ಗ ಮಧ್ಯೆಯೇ ಆತ ಮೃತಪಟ್ಟಿದ್ದಾರೆ ಎಂದು ದೃಢಪಡಿಸಿದ್ದಾರೆ. ಆದರಿಂದ ಘಟನೆ ಸಂಬಂಧ ಯಾವುದೇ ಸೂಚನಾ ಫಲಕ ಹಾಕದೇ ಕ್ಯಾಂಟರ್ ನಿಲ್ಲಿಸಿದ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಕೈಗೊಳ್ಳಲಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ. ಕೆ.ಜಿ.ಹಳ್ಳಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ರಿಯಲ್ ಎಸ್ಟೇಟ್ ಏಜೆಂಟ್ ಸಾವು
ಮತ್ತೊಂದು ಪ್ರಕರಣದಲ್ಲಿ ರಸ್ತೆ ದಾಟುತ್ತಿದ್ದ ಪಾದಚಾರಿಗೆ ಬೈಕ್ ಡಿಕ್ಕಿ ಹೊಡೆದು ಮೃತಪಟ್ಟಿರುವ ಘಟನೆ ಚಿಕ್ಕಜಾಲ ಸಮೀಪ ನಡೆದಿದೆ.
ಜಯನಗರ ನಿವಾಸಿ ಆಸಿಫ್(೫೬) ಮೃತರು. ನಗರದಲ್ಲಿ ರಿಯಲ್ ಎಸ್ಟೇಟ್ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ ಆಸಿಫ್, ಮಂಗಳವಾರ ರಾತ್ರಿ ೭.೩೦ರ ಸುಮಾರಿಗೆ ಬೆಂಗಳೂರು-ಬಳ್ಳಾರಿ ರಸ್ತೆಯ ಕಾಡೇನಹಳ್ಳಿ ಗೇಟ್ ಸಮೀಪದ ರಸ್ತೆ ದಾಟುತ್ತಿದ್ದರು. ಈ ವೇಳೆ ಅತೀವೇಗವಾಗಿ ಬಂದ ಬೈಕ್ ಆಸೀಫ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ತೀವ್ರಸ್ರಾವದಿಂದ ಗಾಯಗೊಂಡಿದ್ದರು. ಕೂಡಲೇ ಸ್ಥಳೀಯರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ ಮೃತಪಟ್ಟಿದ್ದಾರೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ. ಚಿಕ್ಕಜಾಲ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net