

ಬೆಳಗಾವಿ : ಅತಿವೃಷ್ಟಿ ಹಾಗೂ ಕರೊನಾದಿಂದ ತತ್ತರಿಸಿರುವ ನೇಕಾರರ ಬದುಕಿಗೆ ಆಸರೆಯಾಗುವ ನಿಟ್ಟಿನಲ್ಲಿ ಜವಳಿ ಉದ್ಯಮದ ಚೇತರಿಕೆಗೆ ರಾಜ್ಯ ಸರ್ಕಾರದಿಂದ ವಿಶೇಷ ಯೋಜನೆ ರೂಪಿಸಬೇಕು ಹಾಗೂ 10 ಎಚ್‌ಪಿ ವರೆಗೆ ಸಂಪರ್ಕ ಹೊಂದಿದ ಕೈಮಗ್ಗದ ಘಟಕಗಳಿಗೆ ಉಚಿತ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಉತ್ತರ ಕರ್ನಾಟಕ ವೃತ್ತಿಪರ ನೇಕಾರರ ಹೋರಾಟ ಸಮಿತಿ ಸಂಚಾಲಕ ಗಜಾನನ ಗುಂಜೇರಿ ಹೇಳಿದರು.
ನಗರದಲ್ಲಿನ ಖಾಸಗಿ ಹೊಟೇಲ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ನೇಕಾರ, ನೇಕಾರ ಕಾರ್ಮಿಕರಿಗಾಗಿ ರೂಪಿಸಿರುವ ಯೋಜನೆಗಳನ್ನು ಸರ್ಕಾರ ಹಂತ ಹಂತವಾಗಿ ರದ್ದುಪಡಿಸಿದ್ದರಿಂದ ನೇಕಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜವಳಿ ಇಲಾಖೆಗೆ ಸರ್ಕಾರವು ವಿಶೇಷ ಯೋಜನೆ ರೂಪಿಸುವುದರ ಜತೆಗೆ ಹೆಚ್ಚಿನ ಅನುದಾನ ನೀಡಿ, ಇಲಾಖೆ ಯೋಜನೆಗಳು ಅರ್ಹರಿಗೆ ಲಭಿಸುವಂತೆ ಮಾಡಬೇಕು ಎಂದು ಆಗ್ರಹಿಸಿದರು.
ಕೈ ಮಗ್ಗ ಮತ್ತು ವಿದ್ಯುತ್ ಚಾಲಿತ ಕಾವೇರಿ ಹ್ಯಾಂಡಲ್ಯೂಮ್ ನಿಗಮಗಳಿಗೆ ಅನುದಾನ ನೀಡಿ ಪುನಶ್ಚೇತನಗೊಳಿಸಬೇಕು. ಉತ್ತರ ಕರ್ನಾಟಕ ಭಾಗದಲ್ಲಿ ಹೈಟೆಕ್ ಟೆಕ್ಸಟೈಲ್ ಕಾಲೇಜು, ಟೆಕ್ಸಟೈಲ್ ಸಂಶೋಧನಾ ಕೇಂದ್ರ ಸ್ಥಾಪಿಸಬೇಕು ಹಾಗೂ ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಕುಟುಂಬ ಕಲ್ಯಾಣ, ಸಮಾಜ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಬೇಕಾದ ಸೀರೆಗಳನ್ನು ನೇಕಾರರ ಮೂಲಕವೇ ಖರೀದಿಸುವ ನಿಯಮವಾಳಿ ರೂಪಿಸಿ, ನೇಕಾರರ ಬದುಕಿಗೆ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯಾದ್ಯಂತ ನೇಕಾರರನ್ನು ಅಸಂಘಟಿತ ಕಾರ್ಮಿಕರ ವಲಯಕ್ಕೆ ಸೇರಿಸಿ ಹಾಗೂ ಕಟ್ಟಡ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳು ವೃತ್ತಿಪರ ನೇಕಾರರಿಗೂ ಸೌಲಭ್ಯ ವಿಸ್ತರಿಸಬೇಕು. ನೇಕಾರರಿಗೆ ಡಿಸಿಸಿ ಹಾಗೂ ಪಿಕೆಪಿಎಸ್‌ಗಳ ಮೂಲಕ ಶೂನ್ಯ ಬಡ್ಡಿದರದಲ್ಲಿ 5-10 ಲಕ್ಷ ರೂ.ಸಾಲ ವಿತರಿಸಬೇಕು. ರಾಜ್ಯದ ನೇಕಾರರ ಅಭಿವೃದ್ಧಿಗಾಗಿ ಸಿದ್ದರಾಮಯ್ಯನವರ ಸರ್ಕಾರದ ಅವಧಿಯಲ್ಲಿ ನೇಕಾರರಿಗೆ ವಿಶೇಷ ಯೋಜನೆ 20 ಎಚ್.ಪಿ. ವಿದ್ಯುತ್ ಸಂಪರ್ಕ ಹೊಂದಿರುವ ಘಟಕಗಳಿಗೆ ರೂ. 1.25 ಪೈಸೆ ವಿದ್ಯುತ್ ದರ ಪಾವತಿಸಿಕೊಳ್ಳಲಾಗುತ್ತಿದೆ. ಚುನಾವಣಾ ಸಮಯದಲ್ಲಿ ನೀಡಿದ ಭರವಸೆಯಂತೆ ಯಾವುದೇ ಶುಲ್ಕವಿಲ್ಲದೆ ಈ ಯೋಜನೆಯನ್ನು ಮುಂದುವರೆಸಬೇಕು ಕನಿಷ್ಠ 10 ಎಚ್.ಪಿ ವರೆಗೆ ಸಂಪರ್ಕ ಹೊಂದಿದ ಘಟಕಗಳಿಗೆ ಉಚಿತ ವಿದ್ಯುತ್ ಪೂರೈಕೆಗೆ ಆದೇಶ ನೀಡಬೇಕು ಎಂದು ಆಗ್ರಹಿಸಿದರು.
ಇನ್ನು ಅನುದಾನವಿಲ್ಲದೆ ಅವನತಿಯ ಅಂಚಿನಲ್ಲಿರುವ ಜವಳಿ ಉದ್ಯಮದ ಬೆಳವಣಿಗೆಗೆ ಸರ್ಕಾರದ ಜವಳಿ ಇಲಾಖೆ ಹೆಚ್ಚಿನ ಅನುದಾನ ನೀಡಿ ಇಲಾಖೆಯ ಯೋಜನೆಗಳನ್ನು ಪಡೆಯಲು ರಾಜ್ಯದ ನೇಕಾರರಿಗೆ ಆದ್ಯತೆ ನೀಡಬೇಕು. ಒಂದು ವೇಳೆ ಸರ್ಕಾರ ನೇಕಾರರ ನೆರವಿಗೆ ಬರದೇ ಇದ್ದರೆ ನಾವು ಮಹಾರಾಷ್ಟ್ರ ಅಥವಾ ಕೇರಳ ಸೇರಿದಂತೆ ಬೇರೆ ಬೆರೆ ರಾಜ್ಯಕ್ಕೆ ಕೆಲಸಕ್ಕೆ ಗುಳೆ ಹೋಗುವ ಅನಿವಾರ್ಯ ಎದುರಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಲೋಹಿತ್ ಮೊರಕರ್, ಆನಂದ ಉಪರಿ, ಬಸವರಾಜ ಡವಳಿ, ರಮೇಶ ಪಾಟೀಲ ಮಾರುತಿ ಸಾತ್ಪುತೆ, ವಿನಾಯಕ ಕಾಮಕರ ಇದ್ದರು.