

ಬೆಂಗಳೂರು: ಲೋಕೋಪಯೋಗಿ ಇಲಾಖೆ ಗಮನಕ್ಕೆ ತರದೇ ಬಹುಮಹಡಿ ಕಟ್ಟಡದ ಕೊಠಡಿ ಸಂಖ್ಯೆ 505, 506 ಮತ್ತು 507 ಸಂಯೋಜಿಸಿ ಕೈಗೆತ್ತಿಕೊಂಡಿದ್ದ ನವೀಕರಣ ಕೆಲಸಕ್ಕೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ನಿರ್ಬಂಧ ವಿಧಿಸಿದೆ.
ಮಾಹಿತಿ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಅಧಿಕಾರಿಗಳು ತಮ್ಮದೇ ಹಂತದಲ್ಲಿ ನಿರ್ಧಾರ ಕೈಗೊಂಡು, ಇಲಾಖೆ ಅಧೀನದ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೊತ್ಸಾಹಕ ಸೊಸೈಟಿಗೆ ಕಚೇರಿ ವ್ಯವಸ್ಥೆ ಮಾಡಲು ಮುಂದಾಗಿದ್ದರು.
ಇಲಾಖೆಗೆ ಸೇರಿದ 505, 506 ಮತ್ತು 507 ಕೊಠಡಿಗಳನ್ನು ಸಂಯೋಜಿಸಿ ನವೀಕರಣ ಮಾಡಿ ಸುಸಜ್ಜಿತವಾದ ಕಚೇರಿ ಕೆಲಸ ನಡೆದಿತ್ತು. ಯಾವುದೇ ಇಲಾಖೆ ಒಪ್ಪಿಗೆ, ಗಮನಕ್ಕೆ ತರದೇ ಈ ಕೆಲಸ ನಡೆದಿದೆ ಎಂದು ಡಿಪಿಎಆರ್ ಕಾರ್ಯದರ್ಶಿ ಜಿ.ಸತ್ಯವತಿ ಅವರಿಗೆ ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ರಮೇಶ್ ಸಂಗಾ ದೂರಿತ್ತಿದ್ದರು.
ತಕ್ಷಣ ಕಾರ್ಯಪ್ರವೃತ್ತರಾದ ಇಲಾಖೆ ಕಾರ್ಯದರ್ಶಿ ಸ್ಥಳ ಸಮೀಕ್ಷೆ ನಡೆಸಿದಾಗ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯಕ್ಕೆ ನಿಗದಿಪಡಿಸಿದ ಜಾಗದಲ್ಲಿ ಈ ಕೆಲಸ ನಡೆಯುತ್ತಿರುವುದು ದೃಢಪಟ್ಟಿದೆ.
ಕೊಠಡಿಗಳಿಗೆ ವೆಟ್ರಿೈಡ್ ಟೈಲ್ಸ್, ಗೋಡೆಗಳಿಗೆ ಬಣ್ಣ ಬಳಿದಿರುವುದನ್ನು ಹೊರತುಪಡಿಸಿ ಎಸಿ, ಕಾರ್ಪೆಟ್, ವಿಭಜನೆ, ಕುರ್ಚಿಗಳು, ಟೇಬಲ್, ವಿದ್ಯುದ್ದೀಕರಣ ಇತ್ಯಾದಿ ನವೀಕರಣ ಇಲಾಖೆಯೇ ಖಾಸಗಿ ಸಂಸ್ಥೆಯಿಂದ ಮಾಡಿಸುತ್ತಿರುವುದು ನಿಯಮಬಾಹಿರವಾಗಿದೆ.
ಬಹುಮಹಡಿ ಕಟ್ಟಡದಲ್ಲಿ ಸಚಿವಾಲಯದ ಇಲಾಖೆಗಳಿಗೆ ಸ್ಥಳಾವಕಾಶದ ಕೊರತೆಯಿದೆ. ಹೀಗಾಗಿ ಬಹುಮಹಡಿ ಕಟ್ಟಡದ ಕೊಠಡಿಗಳನ್ನು ನಿಗಮ/ಮಂಡಳಿ/ಆಯೋಗ/ಪ್ರಾಧಿಕಾರಿಗಳ/ ಸಂಸ್ಥೆಗಳ ಕಚೇರಿಗಳಿಗೆ ಉಪಯೋಗಿಸಬಾರದು ಎಂದು ಮಾಹಿತಿ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸೂಚಿಸಿದೆ.
ದೂರು ನೀಡಿದ ತಕ್ಷಣವೇ ವಾಸ್ತವಾಂಶ ತಿಳಿದುಕೊಂಡು ನಿಯಮಬಾಹಿರ ನವೀಕರಣ, ಬೇರೆ ಸಂಸ್ಥೆ ಕಚೇರಿಗೆ ಸ್ಥಳಾವಕಾಶದ ಪ್ರಯತ್ನ ನಿಲ್ಲಿಸಲಾಗಿದೆ. ಡಿಪಿಎಆರ್ ಕಾರ್ಯದರ್ಶಿ ತ್ವರಿತ ಸ್ಪಂದನೆಗೆ ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ರಮೇಶ್ ಸಂಗಾ ಹರ್ಷ ವ್ಯಕ್ತಪಡಿಸಿದ್ದಾರೆ.