ಎಂಎಸ್​ಎಂಇ ವಲಯಕ್ಕೆ ಪ್ರತ್ಯೇಕ ಕೈಗಾರಿಕಾ ನೀತಿ:ಬಜೆಟ್​ನಲ್ಲಿ ಆದ್ಯತೆಗೆ ಕಾಸಿಯಾ ಹರ್ಷ

Kassia
Kassia
Published on

ಬೆಂಗಳೂರು: ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (ಎಂಎಸ್​ಎಂಇ) ಬಜೆಟ್​ನಲ್ಲಿ ಪ್ರತ್ಯೇಕ ಕೈಗಾರಿಕಾ ನೀತಿ ರೂಪಿಸಿರುವುದನ್ನು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ಸ್ವಾಗತಿಸಿದೆ.

ಎಂಎಸ್​ಎಂಇ ಕ್ಲಸ್ಟರ್​ ಅಭಿವೃದ್ಧಿ ಯೋಜನೆಯಡಿ ಸಾಮಾನ್ಯ ಸೌಲಭ್ಯ ಕೇಂದ್ರಗಳ ಸ್ಥಾಪನೆ, ಜವಳಿ ಅಭಿವೃದ್ಧಿಗೆ ಪಿಪಿಪಿ ಮಾದರಿಯಲ್ಲಿ 5 ಟೆಕ್ಸ್​ಟೈಲ್​ ಪಾರ್ಕ್​, ಕಲಬುರಗಿಯಲ್ಲಿ ಕೇಂದ್ರ ಸರ್ಕಾರದ ಸಹಯೋಗದಲ್ಲಿ ಟೆಕ್ಸ್​ಟೈಲ್​ ಪಾರ್ಕ್​ ನಿರ್ಮಾಣಕ್ಕೆ ಬಜೆಟ್​ನಲ್ಲಿ ಕ್ರಮ ಕೈಗೊಂಡಿರುವುದು ಖುಷಿ ತಂದಿದೆ. ಬೆಂಗಳೂರು ವಲಯದಲ್ಲಿ ಇವಿ ಕ್ಲಸ್ಟರ್​, ಕೋಲಾರದ ಶಿವಾರಪಟ್ಟಣದಲ್ಲಿ ಕೈಗಾರಿಕಾ ಪಾರ್ಕ್​, ತುಮಕೂರಿನಲ್ಲಿ ಜಪಾನೀಸ್​ ಇಂಡಸ್ಟ್ರಿಯಲ್​ ಪಾರ್ಕ್​, ಉತ್ತರ ಕರ್ನಾಟಕ ಅಭಿವೃದ್ಧಿಗೆ ವಿಜಯಪುರ ಜಿಲ್ಲೆಯಲ್ಲಿ ಪ್ಲಗ್​ ಪ್ಲೇ ಸೌಕರ್ಯವಿರುವ ಫ್ಲಾಟ್​ ಫ್ಯಾಕ್ಟರಿ ಸ್ಥಾಪನೆಯಿಂದ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಕಾಸಿಯಾ ಅಧ್ಯಕ್ಷ ಎಂ.ಜಿ. ರಾಜಗೋಪಾಲ್​ ಹೇಳಿದರು.

ಕೋಲಾರ ಜಿಲ್ಲೆಯ ನರಸಾಪುರದಲ್ಲಿ ಉದ್ಯೋಗಸ್ಥ ಮಹಿಳೆಯರಿಗೆ 173 ಕೋಟಿ ರೂ. ವೆಚ್ಚದಲ್ಲಿ ಮಹಿಳಾ ವಸತಿ ನಿಲಯ, ತುಮಕೂರು ಜಿಲ್ಲೆಯ ವಸಂತನರಸಾಪುರದಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ಮಹಿಳಾ ವಸತಿ ನಿಲಯಗಳ ನಿರ್ಮಾಣ, ಜವಳಿ ಹಾಗೂ ಸಿದ್ಧ ಉಡುಪು ಕ್ಷೇತ್ರದಲ್ಲಿ ಹೆಚ್ಚಿನ ಬಂಡವಾಳ ಆಕರ್ಷಿಸಲು ಅಂದಾಜು 2 ಲಕ್ಷ ಉದ್ಯೋಗ ಸೃಜಿಸುವ ನೂತನ ಜವಳಿ ನೀತಿ ಘೋಷಣೆಯು ಸ್ವಾಗತಾರ್ಹ. ಆದಾಗ್ಯೂ, ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ಕೆಎಸ್​ಎಸ್​ಐಡಿಸಿ, ಕೆಐಎಡಿಬಿ ಹಾಗೂ ಖಾಸಗಿ ಕೈಗಾರಿಕಾ ಪ್ರದೇಶಗಳಲ್ಲಿ ಅಗತ್ಯ ಮೂಲ ಸೌಕರ್ಯಗಳನ್ನು ತುರ್ತಾಗಿ ಒದಗಿಸುವ ಕುರಿತು ಕ್ರಮ ಕೈಗೊಳ್ಳಬೇಕಿತ್ತು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net