

ಬಸವನಬಾಗೇವಾಡಿ: ನಾಡಿನ ಬಸವಭಕ್ತರ ಆಸೆಯಂತೆ ಬಸವಣ್ಣನವರ ಜನ್ಮಸ್ಥಳ ಬಸವನಬಾಗೇವಾಡಿಯನ್ನು ಪ್ರತ್ಯೇಕ ಪ್ರಾಧಿಕಾರ ರಚಿಸುವ ಮೂಲಕ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ರಾಜ್ಯಸರ್ಕಾರ ಬದ್ಧವಾಗಿದೆ ಎಂದು ಜವಳಿ, ಸಕ್ಕರೆ, ಕಬ್ಬು ಅಭಿವೃದ್ಧಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ಶನಿವಾರ ಪಟ್ಟಣದ ಬಸವೇಶ್ವರ ದೇವಸ್ಥಾನಕ್ಕೆ ತೆರಳಿ ಮೂಲನಂದಿಶ್ವರ ವಿಶೇಷ ಪೂಜೆ ಸಲ್ಲಿಸಿ ನಂತರ ಬಸವೇಶ್ವರ ದೇವಸ್ಥಾನದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ನಂತರ ಮಾತನಾಡಿದ ಅವರು, ಬಸವಣ್ಣನವರ ಜನ್ಮಸ್ಥಳವಾದ ಬಸವನಬಾಗೇವಾಡಿಯನ್ನು ಪ್ರತ್ಯೇಕ ಪ್ರಾಧಿಕಾರ ರಚಿಸಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ಕೈಗೊಳ್ಳಬೇಕೆಂಬ ಆಸೆಯು ನಾಡಿನ ಬಸವಭಕ್ತರ ಹಲವಾರು ದಶಕಗಳ ಬೇಡಿಕೆಯಾಗಿದ್ದು. ಅವರ ಅಸೆಯಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜತೆ ಮಾತನಾಡಿದ್ದು. ಶೀಘ್ರದಲ್ಲೇ ಪ್ರತ್ಯೇಕ ಪ್ರಾಧಿಕಾರ ರಚಿಸುವ ಭರವಸೆ ನೀಡಿದ್ದಾರೆ ಎಂದರು.
ಬಸವನಬಾಗೇವಾಡಿ ಪಟ್ಟಣಕ್ಕೆ ರಾಜ್ಯ ಮತ್ತು ಹೊರರಾಜ್ಯಗಳಿಂದ ನಿತ್ಯ ಸಾವಿರಾರು ಪ್ರವಾಸಿಗರು ಬಸವ ಜನ್ಮಸ್ಮಾರಕ ಮತ್ತು ಮೂಲನಂದಿಶ್ವರ ದೇವಸ್ಥಾನಕ್ಕೆ ಬರುತ್ತಾರೆ. ಅವರಿಗೆ ಅಗತ್ಯವಿರುವ ಮೂಲ ಸೌಲಭ್ಯಗಳನ್ನು ಒದಗಿಸುವಂತೆ ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದರು.
ದೇವಸ್ಥಾನದಲ್ಲಿ 1.50 ಕೋಟಿ ರೂ. ವೆಚ್ಚದಲ್ಲಿ ದಾಸೋಹ ಭವನ ನಿರ್ಮಾಣದ ಪ್ರಗತಿ ಕಾರ್ಯದ ಬಗ್ಗೆ ದೇವಸ್ಥಾನದ ಒಳ ಆವರಣದಲ್ಲಿ ಭಕ್ತರಿಗೆ ಬಿಸಿಲು, ಮಳೆಯ ರಕ್ಷಣೆಗಾಗಿ ದೇವಸ್ಥಾನದ ಗುಡಿಯ ಸುತ್ತಲು ಮೇಲ್ಛಾವಣಿ ಕಾಮಗಾರಿ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿದರು. ಪ್ರವಾಸಿಗರಿಗೆ ಇನ್ನಷ್ಟು ಅಗತ್ಯವಿರುವ ಮೂಲ ಸೌಲಭ್ಯಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ನಂತರ ಪ್ರವಾಸಿಮಂದಿರದಲ್ಲಿ ಬಸವನಬಾಗೇವಾಡಿ ಮತಕ್ಷೇತ್ರದ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದ ಅವರು, ಪ್ರತಿ ತಿಂಗಳು 1 ಅಥವಾ 2 ದಿನ ಬಸವನಬಾಗೇವಾಡಿ ಪಟ್ಟಣದಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಲಾಗುವುದು ಮತ್ತು ಅಭಿವೃದ್ಧಿ ಕಾರ್ಯಗಳ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದರು.
ಮತಕ್ಷೇತ್ರದ ನೂರಾರು ಜನರು ತಮ್ಮ ಅನೇಕ ಕೆಲಸ ಕಾರ್ಯಗಳ ಮತ್ತು ಕ್ಷೇತ್ರದ ವಿವಿಧ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಚಿವರೊಂದಿಗೆ ಚರ್ಚಿಸಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ದುಂಡಪ್ಪ ಕೊಮಾರ, ಸಿಡಿಪಿಒ ನಿರ್ಮಲ ಸುರಪುರ, ಲೋಕೋಪಯೋಗಿ ಇಲಾಖೆಯ ಜೆ.ವಿ. ಕೀರಸೂರ ಹಾಗೂ ವಿವಿಧ ಇಲಾಖೆ ಅಧಿಕಾರಿಗಳಿದ್ದರು.