ಕರೊನಾದಿಂದ ಸಂಕಷ್ಟಕ್ಕೆ ಸಿಲುಕಿದ ಗಂಡಿಬಾಗಿಲಿನ ಸಿಯೋನ್ ಆಶ್ರಮ

Seom Ashram
Published on

ಬೆಳ್ತಂಗಡಿ: ತಾಲೂಕಿನ ನೆರಿಯ ಗ್ರಾಮದ ಗಂಡಿಬಾಗಿಲಿನ ಸಿಯೋನ್ ಆಶ್ರಮ  ಕರೊನಾ ಹೊಡೆತ ಸಂಕಷ್ಟಕ್ಕೆ ಸಿಲುಕಿಸಿದೆ. ಮಾನಸಿಕ ರೋಗಿಗಳಿಗೆ ಹಾಗೂ ನಿರ್ಗತಿಕರಿಗಾಗಿ ಸಮಾಜಸೇವೆ ಮಾಡುವ ದೃಷ್ಟಿಯಿಂದ ಹಲವಾರು ವರ್ಷಗಳಿಂದ ಆಶ್ರಮ ಕಾರ್ಯನಿರ್ವಹಿಸುತ್ತಿದ್ದು ಒಟ್ಟು 270 ಆಶ್ರಮ ವಾಸಿಗಳಿದ್ದಾರೆ. ಇದುವರೆಗೆ ಇದರಲ್ಲಿ 135 ಮಂದಿಗೆ ಕರೊನಾ ಪಾಸಿಟಿವ್ ಕಂಡುಬಂದಿದೆ. 33 ಮಂದಿ ಐಸೋಲೇಶನ್ ಮುಗಿಸಿದ್ದಾರೆ. 101 ಪ್ರಕರಣಗಳು ಸಕ್ರಿಯವಾಗಿವೆ. ಹಲವು ಸಿಬ್ಬಂದಿಗಳಿಗೂ ಸೋಂಕು ತಗುಲಿದ್ದು, ಆಶ್ರಮದ ದೈನಂದಿನ ಚಟುವಟಿಕೆಗಳಿಗೆ ಭಾರಿ ಸಮಸ್ಯೆ ಎದುರಾಗಿದೆ.

ಆಶ್ರಮದ ಪರಿಸ್ಥಿತಿ ಅರಿತ ದಾನಿಗಳು, ಸಂಘ- ಸಂಸ್ಥೆಗಳು, ಔಷಧ ಹಾಗೂ ಇತರ ಕೆಲವು ಅಗತ್ಯ ವಸ್ತುಗಳ ನೆರವು ನೀಡಿದ್ದಾರೆ. ಆದರೆ ಸಿಯೋನ್ ಆಶ್ರಮದಲ್ಲಿ ಕರೊನಾ ಹೊಡೆತದಿಂದ ಸಂಕಷ್ಟದ ಪರಿಸ್ಥಿತಿ ಮುಂದುವರಿದಿದೆ. ಆಶ್ರಮವಾಸಿಗಳ ಪೈಕಿ ಇನ್ನೂ ಹಲವರ ವರದಿ ಬರಲು ಬಾಕಿ ಇದ್ದು, ರೋಗ ಪೀಡಿತರ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ. ಆಶ್ರಮದಲ್ಲಿ ಜಾನುವಾರುಗಳಿದ್ದು, ಅವುಗಳ ಕೆಲಸ ಕಾರ್ಯ ನಿರ್ವಹಿಸುವವರು ಕರೊನಾ ಕಾರಣದಿಂದ ಲಭ್ಯವಾಗದೆ ಅವುಗಳಿಗೂ ಮೇವಿನ ಕೊರತೆ ಉಂಟಾಗಿದೆ. ಇದರಿಂದ ಆಶ್ರಮದ ಸ್ಥಿತಿಯನ್ನು ಸರಿದೂಗಿಸಲು ಇನ್ನಷ್ಟು ನೆರವಿನ ಅಗತ್ಯವಿದೆ.

ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಅಕ್ಕಿ, ಬೇಳೆ, ತರಕಾರಿ ಸಹಿತ ಅಗತ್ಯ ವಸ್ತುಗಳನ್ನು ಪೂರೈಸುತ್ತಿದ್ದಾರೆ. ಸಂಘ, ಸಂಸ್ಥೆಗಳು, ದಾನಿಗಳು ಸಹಕಾರ ನೀಡಿದ್ದಾರೆ. ಶಾಸಕರು ಭೇಟಿ ನೀಡಿದ್ದು ನೆರವು ನೀಡುವ ಕುರಿತು ತಿಳಿಸಿದ್ದಾರೆ. ಆಶ್ರಮವು ಆರ್ಥಿಕ ಬಿಕ್ಕಟ್ಟಿನಿಂದಲೂ ಬಳಲುತ್ತಿದೆ. ಆಶ್ರಮವಾಸಿಗಳನ್ನು ಸಲಹುವುದು ನಮ್ಮ ಪ್ರಮುಖ ಕರ್ತವ್ಯ.

-ಯು.ಸಿ.ಪೌಲೋಸ್ ಟ್ರಸ್ಟಿ, ಸಿಯೋನ್ ಆಶ್ರಮ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net