

| ಅಜ್ಜಮಾಡ ರಮೇಶ್ ಕುಟ್ಟಪ್ಪ ಕೊಡಗು
ಕೊಡಗು ಜಿಲ್ಲೆಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆ ಎದುರಿಸಲು ರಾಜಕೀಯ ಪಕ್ಷಗಳು ಹಾಗೂ ಟಿಕೆಟ್ ಆಕಾಂಕ್ಷಿಗಳು ಈಗಾಗಲೆ ತಾಲೀಮು ಆರಂಭಿಸಿದ್ದಾರೆ. 20 ವರ್ಷಗಳಿಂದ ಕೊಡಗು ಬಿಜೆಪಿಯ ಭದ್ರಕೋಟೆಯಾಗಿದೆ. ಅದಕ್ಕೂ ಮೊದಲು ಕಾಂಗ್ರೆಸ್ ನೆಲೆಯೂರಿತ್ತು. ಮಡಿಕೇರಿ ಮತ್ತು ವಿರಾಜಪೇಟೆ ಕ್ಷೇತ್ರಗಳನ್ನು ಮಾತ್ರ ಹೊಂದಿರುವ ಈ ಪುಟ್ಟ ಜಿಲ್ಲೆಯಲ್ಲಿ ಪ್ರಸ್ತುತ ರಾಜಕೀಯ ಚಟುವಟಿಕೆ ಗರಿಗೆದರಿವೆ. 2008ರಲ್ಲಿ ಕ್ಷೇತ್ರ ಮರುವಿಂಗಡಣೆ ಆದ ಬಳಿಕ ನಡೆದಿರುವ ಮೂರು ಚುನಾವಣೆಗಳಲ್ಲೂ ಉಭಯ ಕ್ಷೇತ್ರಗಳಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದೆ. ಜಿಲ್ಲೆಯಲ್ಲಿ ಆಗಿರುವ ಮತ್ತು ಆಗಬೇಕಾಗಿರುವ ಅಭಿವೃದ್ಧಿ ಕಾರ್ಯಗಳು, ಜನರು ಎದುರಿಸುತ್ತಿರುವ ಮೂಲಸೌಕರ್ಯ ಕೊರತೆಯಂಥ ವಿಷಯಗಳಿಗಿಂತ ಜಾತಿ- ಧರ್ಮದ ವಿಚಾರ ಹಾಗೂ ಪಕ್ಷ ಸಂಘಟನೆ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಸರ್ಕಾರದ ವತಿಯಿಂದ ಟಿಪ್ಪು ಜಯಂತಿ ಆಚರಣೆಗೆ ನಿರ್ಧಾರ ತೆಗೆದುಕೊಂಡ ಬಳಿಕ ಆ ವಿಷಯ ಪ್ರತಿ ಚುನಾವಣೆಯಲ್ಲೂ ಪ್ರಮುಖ ಅಸ್ತ್ರವಾಗಿ ಬಳಕೆಯಾಗುತ್ತಿದೆ. ಭಾವನಾತ್ಮಕ ವಿಷಯಗಳಿಗೆ ಕೊಡವರು ಮನ್ನಣೆ ನೀಡುತ್ತಾರೆ. ಹಾಗಾಗಿ, ಚುನಾವಣೆ ಸಂದರ್ಭದಲ್ಲಿ ಜಾತಿ, ಧರ್ಮದ ನೆಲೆಗಟ್ಟಿನಲ್ಲಿ ಹೆಚ್ಚು ಚರ್ಚೆ ನಡೆಯುತ್ತದೆ. ಸಂಘಟನಾತ್ಮಕ ದೃಷ್ಟಿಯಲ್ಲಿ ಬಿಜೆಪಿ ಇತರೆಲ್ಲ ಪಕ್ಷಗಳಿಗಿಂತ ಹೆಚ್ಚು ಪ್ರಬಲವಾಗಿದೆ. ಕ್ಷೇತ್ರ ಕಸಿಯಲು ಕಾಂಗ್ರೆಸ್ ಹಂಬಲಿಸುತ್ತಿದ್ದರೆ, ಜೆಡಿಎಸ್ ಇಲ್ಲಿ ಹೇಳಿಕೊಳ್ಳುವಷ್ಟು ಬಲ ಹೊಂದಿಲ್ಲ.