

ಉಡುಪಿ: ಕರಾವಳಿ ಪ್ರದೇಶದಲ್ಲಿ ವಿಕೋಪಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರಲಿದ್ದು, ಎಲ್ಲ ಮುಂಜಾಗ್ರತಾ ಕ್ರಮಗಳೊಂದಿಗೆ ವಿಕೋಪ ಪರಿಸ್ಥಿತಿ ಎದುರಿಸಲು ಸದಾ ಸನ್ನದ್ಧವಾಗಿರಬೇಕು ಎಂದು ಎನ್‌ಡಿಆರ್‌ಎಫ್ 10ನೇ ಬೇಟಾಲಿಯನ್ ಸಹಾಯಕ ಕಮಾಂಡೆಂಟ್ ಸೆಂಥಿಲ್ ಕುಮಾರ್ ಹೇಳಿದರು.
ಶುಕ್ರವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಉಡುಪಿ ಜಿಲ್ಲೆಯಲ್ಲಿ ಎನ್‌ಡಿಆರ್‌ಎಫ್ ತಂಡದಿಂದ ನಡೆಯುವ ಕಲ್ಪಿತ ಪ್ರದರ್ಶನ ಕಾರ್ಯಕ್ರಮ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ ಈ ಹಿಂದೆ ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದ ಪ್ರದೇಶಗಳನ್ನು ಹಾಗೂ ತಗ್ಗು ಪ್ರದೇಶಗಳನ್ನು ಪಟ್ಟಿ ಮಾಡಿಟ್ಟು, ಈ ಪ್ರದೇಶಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಅನುಕೂಲವಾಗುವಂತೆ ಅಗತ್ಯ ಸಿದ್ಧತೆ ಮಾಡಿಕೊಂಡಿರಬೇಕು ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ಉಪ ವಿಭಾಗಾಧಿಕಾರಿ ರಾಜು ಮಾತನಾಡಿ, ಎನ್‌ಡಿಆರ್‌ಎಫ್ ತರಬೇತಿಯಲ್ಲಿ ಜಿಲ್ಲೆಯ ಪೊಲೀಸ್, ಅಗ್ನಿಶಾಮಕ ಮತ್ತು ಗೃಹರಕ್ಷಕ ಸೇರಿದಂತೆ ವಿವಿಧ ಇಲಾಖೆಗಳು ಭಾಗವಹಿಸಿ ಸೂಕ್ತ ರಕ್ಷಣಾ ವಿಧಾನಗಳನ್ನು ರೂಢಿಸಿಕೊಳ್ಳಬೇಕು. ಎಲ್ಲ್ಲ ಇಲಾಖೆಗಳು ಪರಸ್ಪರ ಸಮನ್ವಯದ ಮೂಲಕ ವಿಕೋಪ ಸಂದರ್ಭದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಇಂದು ಕಾರ್ಯಾಚರಣೆ: ಎನ್‌ಡಿಆರ್‌ಎಫ್ ವತಿಯಿಂದ ಡಿ.5ರಂದು ಬೆಳಗ್ಗೆ 8.30ರಿಂದ 9.30ರವರೆಗೆ ಉದ್ಯಾವರ ನದಿ ತೀರದಲ್ಲಿ ಕಲ್ಪಿತ ಕಾರ್ಯಾಚರಣೆ ನಡೆಯಲಿದೆ. ಸಭೆಯಲ್ಲಿ ಪೊಲೀಸ್, ಅಗ್ನಿಶಾಮಕ ಮತ್ತು ಗೃಹರಕ್ಷಕ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಲಿದ್ದಾರೆ.