ಗಂಗಾನದಿ ಇಂದಿಗೂ ಪೂಜ್ಯನೀಯ

23Athni1A
Published on

ವಿಜಯವಾಣಿ ಸುದ್ದಿಜಾಲ ಅಥಣಿ

ಗಂಗಾನದಿ ಲೌಕಿಕ, ಅಲೌಕಿಕ ಎರಡನ್ನೂ ಅಖಂಡವಾಗಿಸುವ ಅಮೃತ ವಾಹಿನಿಯಾಗಿದೆ. ಮಾನವ ಚರಿತ್ರೆಯ ಉಗಮದ ಜತೆಗೆ ನೆಲ, ಜಲ, ವಾಯು, ಅಗ್ನಿ, ಆಕಾಶಗಳು ನಮ್ಮ ಆರಾಧನೆಯ ದೈವಗಳಾಗಿ ಇಂದಿಗೂ ಪೂಜ್ಯನೀಯವಾಗಿವೆ ಎಂದು ಹಿರಿಯ ಸಾಹಿತಿ ಡಾ.ಬಾಳಾಸಾಹೇಬ ಲೋಕಾಪುರ ಹೇಳಿದರು.

ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಸ್ಥಳೀಯ ವಿಶ್ವ ಚೇತನ ಪ್ರಕಾಶನ ಹಾಗೂ ಸೃಜನಶೀಲ ಕನ್ನಡ ಸಾಹಿತ್ಯ ಬಳಗದ ಸಹಯೋಗದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸಾಹಿತಿ ಎಸ್.ಕೆ.ಹೊಳೆಪ್ಪನವರ ಅವರ ಕಾವ್ಯಗಂಗೆ ಕವನ ಸಂಕಲನ ಲೋಕಾರ್ಪಣೆ ಹಾಗೂ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಾವು ಗ್ರಹಿಸುವ ಮತ್ತು ಬಳಸುವ ವಿಧಾನದಲ್ಲೇ ನಮ್ಮ ಸಂಸ್ಕೃತಿಯ ಬೇರುಗಳಿವೆ. ಹಾಗೆಯೇ, ಕಾವ್ಯಗಂಗೆ ಕೃತಿಯಲ್ಲಿ ಗಂಗಾನದಿಗೆ ಸಂಬಂಧಿತ ಹಲವು ಪೌರಾಣಿಕ ಹಾಗೂ ಚಾರಿತ್ರಿಕ ಸಂಗತಿಗಳು ಕಥನ, ಕವಿತೆಗಳಾಗಿ ಮೂಡಿ ಬಂದಿವೆ ಎಂದರು.

ಸಾಹಿತಿ ಸಿದ್ದರಾಜ ಪೂಜಾರಿ ಮಾತನಾಡಿ, ಕಾವ್ಯ ಗಂಗೆ ಕೃತಿಯಲ್ಲಿನ ಕವಿತೆಗಳಲ್ಲಿ ವ್ಯಕ್ತವಾಗುವ ಸಾಂಸ್ಕೃತಿಕ ಕಾಳಜಿ ಅನನ್ಯ.ಪೂರ್ವಕಾಲದ ಐತಿಹ್ಯಗಳ ಅಸಂಖ್ಯೆ ಎಳೆಗಳು ಹೆಣೆದುಕೊಂಡು ನಮ್ಮ ಈ ಚರಿತ್ರೆ ರೂಪಿಸಿವೆ ಎಂದು ತಿಳಿಸಿದರು.

ಸಾಹಿತಿ ಎಸ್.ಕೆ.ಹೊಳೆಪ್ಪನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖಂಡರಾದ ಅರವಿಂದರಾವ್ ದೇಶಪಾಂಡೆ, ರವಿ ಕೊಟಾರಗಸ್ತಿ, ಡಾ.ಎಸ್.ಕೆ.ಮೆಲಕಾರ, ನಾರಾಯಣ ಅನಿಖಿಂಡಿ, ಆರ್.ಎಸ್.ದೊಡ್ಡನಿಂಗಗೋಳ, ಅಪ್ಪಾಸಾಹೇಬ ಅಲಿಬಾದಿ, ಬಿ.ಜೆ.ಪಾರ್ವತಿ, ಆರ್.ಎ.ಘಸ್ತಿ, ಎಂ.ಎನ್.ಚಿಂಚೋಳಿ, ಡಾ.ಮಹಾಂತೇಶ ಹೊಳೆಪ್ಪನವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net