

ಹಗರಿಬೊಮ್ಮನಹಳ್ಳಿ: ಹಿರಿಯ ಕಲಾವಿದೆ ಸುಭದ್ರಮ್ಮ ಮನ್ಸೂರು ನಿಧನರಾಗಿ ವಾರ ಕಳೆದಿರುವಾಗಲೆ ರಂಗಭೂಮಿಯ ಮತ್ತೊಂದು ಕೊಂಡಿ ಕಳಚಿದೆ. ಹಿರಿಯ ರಂಗಭೂಮಿ ಕಲಾವಿದ, ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕೋಗಳಿ ಪಂಪಣ್ಣ (78)ಗುರುವಾರ ಬೆಳಗ್ಗೆ ನಿಧನರಾದರು. ಇವರಿಗೆ ಪತ್ನಿ, ಇಬ್ಬರು ಪುತ್ರರು, ಒಬ್ಬ ಪುತ್ರಿ ಸೇರಿ ಅಪಾರ ಬಂಧು-ಬಳಗ ಹಾಗೂ ಕಲಾಭಿಮಾನಿಗಳು ಇದ್ದಾರೆ. ಸ್ವಗ್ರಾಮ ಕೋಗಳಿಯಲ್ಲಿ ಸಂಜೆ ಅಂತ್ಯಕ್ರಿಯೆ ನೆರವೇರಿಸಲಾಯಿತು.
ರಂಗಜಂಗಮ ಪಂಪಣ್ಣರು ಹಾಗೂ ಮರಿಯಮ್ಮನಹಳ್ಳಿಯ ರಂಗ ಕಲಾವಿದೆ ಕೆ.ನಾಗರತ್ನಮ್ಮರ ಸಮಕಾಲೀನರು. ಇವರು ಬಳ್ಳಾರಿ ಜಿಲ್ಲೆಯ ಕೊಟ್ಟೂರು ತಾಲೂಕು ಕೋಗಳಿ ಗ್ರಾಮದವರು. ಚಿಕ್ಕವಯಸ್ಸಿನಲ್ಲಿಯೆ ನಾಟಕಗಳಲ್ಲಿ ಅಭಿನಯಿಸುತ್ತಾ ರಾಷ್ಟ್ರ, ರಾಜ್ಯ ಮಟ್ಟದಲ್ಲಿ ತಮ್ಮ ಕಲಾಪ್ರದರ್ಶನ ಗೈದಿದ್ದಾರೆ. ಎಚ್ಚಮನಾಯಕ, ಸುರಪುರದ ಸಿಂಹ ರಾಜಾ ವೆಂಕಟಪ್ಪ ನಾಯಕ, ಕುರುಕ್ಷೇತ್ರ ಸೇರಿದಂತೆ ಅನೇಕ ಪೌರಾಣಿಕ, ಸಾಮಾಜಿಕ ನಾಟಕಗಳಲ್ಲಿ ಅಭಿನಯಿಸಿ ಜನಮಾನಸದಲ್ಲಿ ಉಳಿದಿದ್ದಾರೆ. ಹೇಮರೆಡ್ಡಿ ಮಲ್ಲಮ್ಮ ಸೇರಿ ಜನಪ್ರಿಯ ನಾಟಕಗಳಲ್ಲಿ ಅಭಿನಯಿಸುವ ಜತೆ ಸಾಕಷ್ಟು ನಾಟಕಗಳನ್ನು ರಚಿಸಿದ್ದು, ನಿರ್ದೇಶನವನ್ನೂ ಮಾಡಿದ್ದಾರೆ. ರಕ್ತರಾತ್ರಿ ನಾಟಕದಲ್ಲಿ ಯಾವುದೇ ಪಾತ್ರ ನೀಡಿದರೂ ಅದಕ್ಕೆ ಜೀವ ತುಂಬುತ್ತಿದ್ದರು.
ಪ್ರಖರ ವಾಗ್ಮಿ, ಅಧ್ಯಯನಶೀಲ, ವೃತ್ತಿ ಬದ್ಧತೆ ಇರುವ ಕೆಲವೇ ಕೆಲವು ರಂಗ ಜಂಗಮರಲ್ಲಿ ಕೋಗಳಿ ಪಂಪಣ್ಣನವರು ಒಬ್ಬರು. ಅವರ ಮಾತುಗಾರಿಕೆ ಶಬ್ದಗಳ ಸ್ಪಷ್ಟ ಉಚ್ಚಾರಣೆ, ಹಾವಭಾವಗಳು, ಪಾತ್ರಗಳಿಗೆ ಜೀವತುಂಬುವ ಅತ್ಯದ್ಭುತ ನಟನೆ ಈಗ ಬರೀ ನೆನಪು ಮಾತ್ರ.
ಇವರಿಗೆ ನಾಟಕ ಅಕಾಡೆಮಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಸಮ್ಮಾನಗಳು ಲಭಿಸಿವೆ. ಇತ್ತೀಚೆಗೆ ನಂದೀಪುರದ ಸ್ವಾಮೀಜಿ ಆಯೋಜಿಸಿದ್ದ ನುಡಿಹಬ್ಬ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. 2002ರಲ್ಲಿ ವೆಂಕಟರಾವ್ ಘೋರ್ಪಡೆ ಜಿಪಂ ಅಧ್ಯಕ್ಷರಾಗಿದ್ದಾಗ ಕೋಗಳಿ ಕ್ಷೇತ್ರದ ಸದಸ್ಯರಾಗಿ ಪಂಪಣ್ಣರು ಸೇವೆ ಸಲ್ಲಿಸಿದ್ದಾರೆ.