

ಎನ್.ಆರ್.ಪುರ: ತಾಲೂಕಿನ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಭ್ರಷ್ಟಾಚಾರ ಹೆಚ್ಚುತ್ತಿರುವ ಆರೋಪ ಕೇಳಿಬಂದಿರುವುದರಿಂದ ಶಾಸಕ ಟಿ.ಡಿ.ರಾಜೇಗೌಡ ಶನಿವಾರ ಕಚೇರಿಗೆ ಭೇಟಿ ನೀಡಿ ಹಿರಿಯ ಉಪನೋಂದಣಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಆಸ್ತಿ ನೋಂದಣಿ, ಆಸ್ತಿ ಖುಲಾಸೆಗೆ ಬರುವ ಸಾರ್ವಜನಿಕರೊಂದಿಗೆ ಹಿರಿಯ ಉಪನೋಂದಣಾಧಿಕಾರಿ ಸುಬ್ರಹ್ಮಣ್ಯ ಏಕವಚನದಲ್ಲಿ ಮಾತನಾಡುತ್ತಾರೆ. ಹಣ ಕೊಡದೆ ಕೆಲಸ ಮಾಡಿಕೊಡುವುದಿಲ್ಲ ಎಂದು ಸಾರ್ವಜನಿಕರು ಆರೋಪಿಸಿದರು. ಸರ್ಕಾರ ನಿಗದಿ ಪಡಿಸಿದ ಶುಲ್ಕ ಪಾವತಿಸಿದರೂ ಲಂಚ ಕೊಡದಿದ್ದರೆ ಕೆಲಸವೇ ಮಾಡಿಕೊಡುವುದಿಲ್ಲ ಎಂದು ವಕೀಲ ಇ.ಸಿ.ಜೋಯಿ ಆಕ್ರೋಶ ವ್ಯಕ್ತಪಡಿಸಿದರು. ಸೀತೂರು ಗ್ರಾಮದ 80 ವರ್ಷದವರೊಬ್ಬರು ಆಸ್ತಿ ನೋಂದಣಿಗೆ ಬಂದಾಗ ಏಕವಚನದಲ್ಲಿ ನಿಂದಿಸಿದರು. 15 ಸಾವಿರ ರೂ. ಲಂಚ ಕೊಡದಿದ್ದರೆ ಕಚೇರಿಗೆ ಬರವುದು ಬೇಡ ಎಂಬುದಾಗಿ ಗದರಿಸಿದ್ದಾರೆ ಎಂದು ತಾಪಂ ಮಾಜಿ ಸದಸ್ಯ ಮಹೇಶ್ ಆರೋಪಿಸಿದರು. ಲಂಚ ಸ್ವೀಕರಿಸುವುದು ಕಾಣಬಾರದೆಂದು ಕ್ಯಾಬಿನ್‌ನ ಗಾಜಿಗೆ ಕಪ್ಪು ಕವರ್ ಅಳವಡಿಸಿದ್ದಾರೆಂದು ಸಾರ್ವಜನಿಕರು ದೂರಿದರು. ಕಾಂಗ್ರೆಸ್ ಕಾರ್ಯಕರ್ತ ಆನೆಗದ್ದೆ ವೆಂಕಟೇಶ್ ಇತರರು ಆಕ್ರೋಶ ವ್ಯಕ್ತಪಡಿಸಿ ಶಾಸಕರ ಸಮ್ಮುಖದಲ್ಲಿ ಕಪ್ಪು ಕವರ್ ತೆರವುಗೊಳಿಸಿದರು. ಅಧಿಕಾರಿ ಪ್ರತಿನಿತ್ಯ ಕಚೇರಿಗೆ ಸಮಯಕ್ಕೆ ಸರಿಯಾಗಿ ಬರುವುದಿಲ್ಲ ಎಂದು ಕೆ.ಎಂ.ಸುಂದರೇಶ್ ಆರೋಪಿಸಿದರು.
ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಸಮರ್ಪಕವಾಗಿ ಕೆಲಸ ಮಾಡದಿದ್ದರೆ ವರ್ಗಾವಣೆ ಮಾಡಿಸಿಕೊಂಡು ಹೋಗಿ. ಸಾರ್ವಜನಿಕರಿಗೆ ಗೌರವಕೊಟ್ಟು ಮಾತನಾಡಬೇಕು. ಇನ್ನೊಮ್ಮೆ ಸಾರ್ವಜನಿಕರಿಂದ ದೂರು ಕೇಳಿಬಂದಲ್ಲಿ ಕ್ರಮಕ್ಕೆ ಸರ್ಕಾರಕ್ಕೆ ಶಿಾರಸು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ನಂತರ ತಹಸೀಲ್ದಾರ್ ಕಚೇರಿಗೆ ಭೇಟಿ ನೀಡಿ ಾರ್ಮ್ 50, 53, 94ಸಿ, 94 ಸಿಸಿ ಸಂಬಂಧಿಸಿದಂತೆ ರೈತರ ದಾಖಲೆಗಳು ಕಳೆದುಹೋಗಿದ್ದರೆ ರಿಜಿಸ್ಟರ್‌ನಲ್ಲಿ ನೋಂದಾಯಿಸಿದ್ದರೆ ಹೊಸದಾಗಿ ದಾಖಲೆ ಸಿದ್ಧಪಡಿಸಿಕೊಡಬೇಕೆಂದು ಕಂದಾಯ ಸಚಿವ ಸೂಚಿಸಿದ್ದಾರೆ. ಹಾಗಾಗಿ ದಾಖಲೆ ಕಳೆದುಹೋದವರ ಹೊಸ ದಾಖಲೆ ಸಿದ್ಧಪಡಿಸಿಕೊಡಬೇಕು ಎಂದು ತಹಸೀಲ್ದಾರ್ ತನುಜಾ ಟಿ.ಸವದತ್ತಿ ಅವರಿಗೆ ಸೂಚಿಸಿದರು. ಪಟ್ಟಣದ 6ನೇ ವಾರ್ಡ್‌ನಲ್ಲಿ ವಾಸವಾಗಿದ್ದು 94ಸಿಸಿ ಅಡಿ ಅರ್ಜಿಸಲ್ಲಿಸಿದ 28 ಜನರಿಗೆ ಹಾಗೂ 94ಸಿ ಅಡಿ ಅರ್ಜಿ ಸಲ್ಲಿಸಿದವರಿಗೆ ಒಟ್ಟು 100 ಜನರಿಗೆ ಗಾಂಧಿಜಯಂತಿ ದಿನ ಹಕ್ಕುಪತ್ರ ವಿತರಿಸಲು ಕ್ರಮಕೈಗೊಳ್ಳಬೇಕೆಂದು ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್, ತಾಲೂಕು ಕಾಂಗ್ರೆಸ್ ಘಟಕದ ಅಧ್ಯಕ್ಷ ಗೇರುಬೈಲು ನಟರಾಜ್, ಕೆಪಿಸಿಸಿ ಸದಸ್ಯ ಮಹಮ್ಮದ್ ಇಫ್ತಿಕಾರ್ ಆದಿಲ್, ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಶೆಟ್ಟಿ, ಸದಸ್ಯರಾದ ಶೋಜಾ, ಜುಬೇದಾ, ಸೈಯದ್ ವಸೀಂ ಇತರರಿದ್ದರು.