

ಲಕ್ಷ್ಮೀಕಾಂತ್ ಕುಲಕರ್ಣಿ ಯಾದಗಿರಿ
ನಾಲ್ಕೈದು ತಿಂಗಳಿಂದ ಜಿಲ್ಲೆಯಲ್ಲಿ ಕರೊನಾ ಹೆಮ್ಮಾರಿ ಕರಡಿ ಕುಣಿತದಿಂದ ಕಂಗೆಟ್ಟ ಜನತೆಗೆ ಹಿರಿಯ ಸಂಶೋಧಕರೂ ಆಗಿರುವ ಖ್ಯಾತ ಸಾಹಿತಿ ಡಿ.ಎನ್.ಅಕ್ಕಿ ಅವರ ಕುಂಚದಿಂದ ಪ್ರತಿನಿತ್ಯ ಮೂಡಿಬರುತ್ತಿರುವ ವ್ಯಂಗ್ಯಚಿತ್ರಗಳು ಮನಸ್ಸಿಗೆ ಆಹ್ಲಾದ ಕೊಡುತ್ತಿವೆ.
ಮೂಲತಃ ಶಹಾಪುರ ತಾಲೂಕಿನ ಗೋಗಿ ಗ್ರಾಮದವಾದ ದವನಪ್ಪ ನಾಭಿರಾಜ ಅಕ್ಕಿ ಅವರಿಗೆ ಸದ್ಯ 78ರ ಪ್ರಾಯ. ಸದ್ಯ ವಿಜಯಪುರದ ಇಂಡಿ ಪಟ್ಟಣದಲ್ಲಿ ನೆಲೆಸಿದ್ದು, ಆಗಾಗ್ಗೆ ಸ್ವಗ್ರಾಮಕ್ಕೆ ಬಂದು ಹೋಗುತ್ತಾರೆ. ಗೋಗಿಯ ಸಕರ್ಾರಿ ಪ್ರಾಥಮಿಕ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಮೂರು ದಶಕಕ್ಕೂ ಹೆಚ್ಚು ಅವಧಿ ಸೇವೆ ಸಲ್ಲಿಸಿದ ಅಕ್ಕಿ, ವೃತ್ತಿಯೊಂದಿಗೆ ಸಂಶೋಧನೆ ಮತ್ತು ಸಾಹಿತ್ಯ ಕ್ಷೇತ್ರದಲ್ಲೂ ಅಪಾರ ಸೇವೆ ಸಲ್ಲಿಸಿದವರು.
ಇಳಿವಯಸ್ಸಿನಲ್ಲೂ ಬತ್ತದ ಕಲೆ ಮತ್ತು ಉತ್ಸಾಹದಿಂದ ಯುವಜನತೆ ಸಾಕಷ್ಟು ಪ್ರೇರಣೆ ಪಡೆದುಕೊಳ್ಳುತ್ತಿದ್ದಾರೆ. ಪ್ರಚಾರದಿಂದ ಸದಾ ಅಂತರ ಕಾಯ್ದುಕೊಂಡಿರುವ ಸಂಯಮಿ. ಮಗುವಿನಂಥ ಮನಸ್ಸು ಹೊಂದಿರುವ ಅಕ್ಕಿ ಅವರದ್ದು ಆಕಾಶದೆತ್ತರ ಪಾಂಡಿತ್ಯ. ಸಮಕಾಲೀನ ವಿದ್ಯಮಾನಗಳನ್ನು ವ್ಯಂಗ್ಯಚಿತ್ರಗಳ ಮೂಲಕ ಸಮ ಸಮಾಜವನ್ನು ಉದಾತ್ತ ಚಿಂತನೆಗಳಿಂದ ಬೆಸೆಯುತ್ತಿದ್ದು, ಇವರ ಕೈಗಳಿಂದ ರಚನೆ ಆಗುತ್ತಿರುವ ವ್ಯಂಗ್ಯಚಿತ್ರಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲೂ ಸಾಕಷ್ಟು ವೈರಲ್ ಆಗುತ್ತಿವೆ.
ಈಗ ಎಲ್ಲೆಡೆ ಶ್ರಾವಣ ಸಂಭ್ರಮ. ಕೆಲವೇ ದಿನಗಳಲ್ಲಿ ಗಣೇಶ ಚತುಥರ್ಿ ಹಬ್ಬ. ಕರೊನಾ ಆತಂಕದ ಇಂದಿನ ದಿನಗಳಲ್ಲಿ ಸಕಲ ವಿಘ್ನಗಳನ್ನು ನಿವಾರಣೆ ಡುವ ಗಣೇಶ ಕೈಲಾಸದಿಂದ ಭೂಮಿಗೆ ಬಂದರೆ ಪರಿಸ್ಥಿತಿ ಹೇಗಿರಬಹುದು ಎಂಬ ಬಗ್ಗೆ ಅಕ್ಕಿ ಅವರು ಬಿಡಿಸಿದ ವ್ಯಂಗ್ಯಚಿತ್ರಗಳು ಓದುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿವೆ.
ಖ್ಯಾತ ಸಾಹಿತಿ ಜಿ.ಪಿ. ರಾಜರತ್ನಂ ಅವರ ಒಂದೋ ಎರಡೋ, ಬಾಳೆಲೆ ಹರಡೋ..' ಶಿಶುಗೀತೆಯನ್ನು ಅಕ್ಕಿ ಅವರು ಕೋವಿಡ್-19 ವಿದ್ಯಮಾನಕ್ಕೆ ತಕ್ಕಂತೆ ಬಿಡಿಸಿರುವಒಂದೋ ಎರಡೋ ಸ್ಯಾನಿಟೈಸರ್ ಹರಡೋ, ಮೂರೋ ನಾಲ್ಕೋ ಮಾಸ್ಕ್ ಹಾಕ್ಕೋ… ಸೇರಿ ಇವರು ಬಿಡಿಸಿದ ನೂರಾರು ವ್ಯಂಗ್ಯಚಿತ್ರಗಳು ಸದ್ದಿಲ್ಲದೆ ಎಲ್ಲರ ಮನ ಸೆಳೆಯುತ್ತಿದೆ.
ವ್ಯಂಗ್ಯಚಿತ್ರವೆಂದರೆ ಚಿತ್ರ ಪ್ರಾಕಾರ. ಅದು ಒಬ್ಬ ಅಥವಾ ವ್ಯಕ್ತಿ ಸಮೂಹದ ಚಿತ್ರ ಅಥವಾ ಅವರ ಕಾರ್ಯವೈಖರಿ ಮತ್ತಿತರ ಸೂಕ್ಷ್ಮ ವಿಚಾರಗಳನ್ನು ಅತ್ಯಂತ ಎಚ್ಚರಿಕೆಯಿಂದ ಗಮನಿಸಿ ತಮ್ಮ ಅನಿಸಿಕೆಗಳನ್ನು ಹಾಸ್ಯ ರೂಪದಲ್ಲಿ ಯಾರ ಮನಸ್ಸಿಗೂ ನೋವಾಗದಂತೆ ಚಕ್ಕನೆ ಪ್ರತಿಕ್ರಿಯಿಸುವ ರೀತಿ. ಜಾಗತೀಕರಣದ ಪ್ರಭಾವದಿಂದಾಗಿ ವ್ಯಂಗ್ಯಚಿತ್ರಗಳು ಕಣ್ಮರೆಯಾಗುತ್ತಿವೆ. ನಶಿಸುತ್ತಿರುವ ಚಿತ್ರಕಲಾ ಪ್ರಕಾರಗಳಲ್ಲಿ ಒಂದಾಗಿರುವ ವ್ಯಂಗ್ಯಚಿತ್ರಗಳನ್ನು ಅತ್ಯಂತ ವಿಡಂಬನಾತ್ಮಕವಾಗಿ ರಚಿಸಿ ಯುವ ಸಮೂಹವನ್ನು ಮತ್ತೆ ಚಿತ್ರಕಲೆಯತ್ತ ಸೆಳೆಯುತ್ತಿರುವ ಅಕ್ಕಿ ಅವರ ಈ ಕಲಾ ತಪಸ್ಸಿಗೆ ಅಭಿಮಾನಿಗಳು ಮತ್ತು ಓದುಗರಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿರುವುದಂತೂ ಖರೆ.