ಪ್ರೋತ್ಸಾಹದ ಕೊರತೆಯಿಂದ ಪ್ರತಿಭಾನ್ವಿತರು ತೆರೆಮರೆಗೆ

mkg1d
Published on

ಚನ್ನಗಿರಿ: ಶಿಕ್ಷಣ ಇಲಾಖೆ ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸುವ ಸಲುವಾಗಿ ಶಾಲೆಗಳಲ್ಲಿ ಪ್ರತಿಭಾ ಕಾರಂಜಿ ಅಚರಣೆಗೆ ಅನುಮತಿ ನೀಡಿದೆ. ಹಾಗಾಗಿ, ಶಾಲಾ ಶಿಕ್ಷಕರಿಂದ ಮಕ್ಕಳ ಪ್ರತಿಭೆಯನ್ನು ಹೊರತರುವಂತಹ ಕೆಲಸ ಆಗಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಲ್. ಜಯಪ್ಪ ತಿಳಿಸಿದರು.

ತಾಲೂಕಿನ ಪಾಂಡೋಮಟ್ಟಿಯಲ್ಲಿ ಅಜ್ಜಿಹಳ್ಳಿ ಕ್ಲಸ್ಟರ್ ಮಟ್ಟದ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಗುರುವಾರ ಮಾತನಾಡಿದರು.

ಗ್ರಾಮೀಣ ಭಾಗದಲ್ಲಿ ಅನೇಕ ರೀತಿಯ ಪ್ರತಿಭೆ ಇರುವಂತಹ ಮಕ್ಕಳು ಇದ್ದಾರೆ. ಪೋತ್ಸಾಹದ ಕೊರತೆಯಿಂದ ಪ್ರತಿಭೆಗಳು ಎಲೆ ಮರೆ ಕಾಯಿಯಂತಾಗಿವೆ. ಅವರನ್ನು ಗುರುತಿಸುವ ಕೆಲಸ ಮೊದಲು ಅಗಬೇಕು ಎಂದರು.

ಪ್ರತಿಭೆಗೆ ಬಡತನ, ಶ್ರೀಮಂತಿಕೆ, ಜಾತಿಗಳು ಅಡ್ಡಿ ಆಗುವುದಿಲ್ಲ. ನಿಮಗೆ ಇಷ್ಟವಾದ ವಿಷಯದಲ್ಲಿ ಆಸಕ್ತಿ ತೋರಿಸಿ ಶಾಲಾ ಶಿಕ್ಷಕರು ಹಾಗೂ ನುರಿತವರಿಂದ ಕಲಿತುಕೊಂಡರೆ ನಿಮ್ಮ ಗುರಿಯನ್ನು ಸುಲಭವಾಗಿ ತಲುಪಬಹುದು ಎಂದು ಹೇಳಿದರು.

ವಿದ್ಯಾರ್ಥಿ ಜೀವನ ಬಂಗಾರ ಆಗುವುದು ಕಲಿಕೆಯನ್ನು ಪೂರ್ಣಗೊಳಿಸಿದಾಗ. ಆದರೆ, ಅಂತಹ ಸಮಯದಲ್ಲಿ ಮನಸ್ಸು ಬೇರೆಡೆಗೆ ತಿರುಗಿಸಿದರೆ ಜೀವನದಲ್ಲಿ ಕಷ್ಟ ಅನುಭವಿಸಬೇಕಾಗುತ್ತದೆ ಎಂದರು.

ಮಕ್ಕಳು ಇಂದು ಟಿವಿ, ಧಾರವಾಹಿ ಹಾಗೂ ಮೊಬೈಲ್‌ಗಳ ದಾಸರಾಗಿದ್ದಾರೆ. ಅದರ ಬದಲಿಗೆ ಪುಸ್ತಕದ ದಾಸರಾದರೆ ಅದು ಒಂದು ದಿನ ನಿಮ್ಮ ತಲೆಯನ್ನು ಮೇಲಕ್ಕೆ ಎತ್ತುವಂತೆ ಮಾಡುತ್ತದೆ ಎಂದರು.

ಕ್ಷೇತ್ರ ಸಮನ್ವಯಾಧಿಕಾರಿ ಡಾ.ಎಸ್. ಶಂಕರಪ್ಪ, ಶಿಕ್ಷಕ ದೇವೆಂದ್ರಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಯೋಗರಾಜ್, ತಿಮ್ಮಪ್ಪ, ಬಿಆರ್‌ಸಿ ನಾಗರಾಜ್, ಕಿರಣ್, ಶಾಲೆ ಮುಖ್ಯಶಿಕ್ಷಕ ಶಿವಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net