ಓದಿನಲ್ಲಿ ಆಸಕ್ತಿ ಹೆಚ್ಚಿಸಲು ಕ್ರೀಡೆಯೂ ಸಹಕಾರಿ: ಸದ್ವಿದ್ಯಾ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಎಂ.ಕೆ.ಹರೀಶ್‌ಕುಮಾರ್ ಹೇಳಿಕೆ

1 (2)
Published on

ಮಂಡ್ಯ: ಓದಿನ ಬಗ್ಗೆ ಆಸಕ್ತಿ ಹೆಚ್ಚಿಸಲು ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಸಹಕಾರಿಯಾಗುತ್ತದೆ ಎಂದು ಸದ್ವಿದ್ಯಾ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಎಂ.ಕೆ.ಹರೀಶ್‌ಕುಮಾರ್ ಹೇಳಿದರು.

ನಗರದ ಪಿಇಟಿ ಕ್ರೀಡಾಂಗಣದಲ್ಲಿ ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ದಕ್ಷಿಣ ವಲಯ ಹಾಗೂ ಸದ್ವಿದ್ಯಾ ಶಿಕ್ಷಣ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ 2023-24ನೇ ಸಾಲಿನ ತಗ್ಗಹಳ್ಳಿ ವೃತ್ತದ ಹಿರಿಯ ಪ್ರಾಥಮಿಕ ಶಾಲೆಗಳ ವೃತ್ತ ಮಟ್ಟದ ಕ್ರೀಡಾಕೂಟದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಾಥಮಿಕ ಮತ್ತು ಪ್ರೌಢಶಾಲೆ ಹಂತದಲ್ಲಿ ವಿದ್ಯಾರ್ಥಿಗಳು ಆಸಕ್ತಿಯಿಂದ ಕ್ರೀಡೆಯಲ್ಲಿ ಭಾಗವಹಿಸುತ್ತಾರೆ. ಆದರೆ ವಿದ್ಯಾಭ್ಯಾಸ ಕುಂಠಿತವಾಗುತ್ತದೆ ಎನ್ನುವ ಕಾರಣಕ್ಕೆ ಕಾಲೇಜಿಗೆ ಹೋದಾಗ ಕಡಿಮೆ ಮಾಡುತ್ತಾರೆ. ಇದು ಸರಿಯಾದ ನಿರ್ಧಾರವಲ್ಲ ಎಂದರು.

ಕ್ರೀಡಾಕೂಟ ಉದ್ಘಾಟಿಸಿದ ದಕ್ಷಿಣ ವಲಯ ಬಿಇಒ ಡಿ.ಉದಯ್‌ಕುಮಾರ್ ಮಾತನಾಡಿ, ನಮ್ಮ ಶರೀರ, ಜೀವನ ಮತ್ತು ಮನಸ್ಸನ್ನು ಗಟ್ಟಿಗೊಳಿಸಲು ಇರುವ ಏಕೈಕ ಮಾರ್ಗ ಕ್ರೀಡೆ ಹಾಗೂ ಯೋಗ. ದೈಹಿಕ ಶಿಕ್ಷಣ ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಮುನ್ನಡೆದರೆ ಗುರಿ ತಲುಪಲು ಸಹಕಾರಿಯಾಗುತ್ತದೆ. ಯುವಕರು ಕ್ರಿಕೆಟ್‌ಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಆದರೆ ವೈಯಕ್ತಿಕವಾಗಿ ಸಾಧನೆ ಮಾಡಲು ಹಲವು ಕ್ರೀಡೆಗಳಿದ್ದು, ಅದರಲ್ಲಿಯೂ ಹೆಚ್ಚು ಆಸಕ್ತಿ ವಹಿಸಿ ಸಾಧಕರಾಗಿ ಎಂದು ಹಾರೈಸಿದರು.

ಶಿಕ್ಷಣ ಇಲಾಖೆಯ ರವಿಶಂಕರ್, ನಂದೀಶ್, ಮುಖ್ಯ ಶಿಕ್ಷಕರಾದ ನಿಂಗರಾಜು, ನಾಗರಾಜು, ದೇವರಾಜು, ಬಿ.ಆರ್.ಶುಭಾ, ತಾಲೂಕು ದೈಹಿಕ ಶಿಕ್ಷಣ ಪರೀಕ್ಷಕ ಎಚ್.ಎಂ.ಕುಮಾರಸ್ವಾಮಿ, ಸದ್ವಿದ್ಯಾ ಶಿಕ್ಷಣ ಟ್ರಸ್ಟ್‌ನ ಕಾರ್ಯದರ್ಶಿ ರತ್ನಶ್ರೀ, ಧರ್ಮದರ್ಶಿ ಫಣಿಮಾಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net