

ಗುಂಡ್ಲುಪೇಟೆ: ಕ್ಷೇತ್ರದ ಮಾಜಿ ಶಾಸಕ ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್. ನಿರಂಜನಕುಮಾರ್ ಅವರ ತಂದೆ ತಾಲೂಕಿನ ಚೌಡಹಳ್ಳಿ ಗ್ರಾಮದ ಹಿರಿಯ ರಾಜಕಾರಣಿ, ಗುತ್ತಿಗೆದಾರರಾಗಿದ್ದ ಸಿ.ಎಂ.ಶಿವಮಲ್ಲಪ್ಪ(84) ಗುರುವಾರ ಬೆಳಗ್ಗೆ ಅನಾರೋಗ್ಯದಿಂದ ನಿಧನರಾದರು. ಇವರಿಗೆ ಪತ್ನಿ ಶಿವಮ್ಮ, ಐವರು ಪುತ್ರಿಯರು ಹಾಗೂ ಒಬ್ಬ ಪುತ್ರ ಇದ್ದಾರೆ.
1941ರಲ್ಲಿ ಚೌಡಹಳ್ಳಿ ಗ್ರಾಮದಲ್ಲಿ ಜನಿಸಿದ ಸಿ.ಎಂ.ಶಿವಮಲ್ಲಪ್ಪ ಪ್ರಥಮದರ್ಜೆ ಗುತ್ತಿಗೆದಾರರಾಗಿ ಅವಿಭಜಿತ ಮೈಸೂರು ಜಿಲ್ಲೆಯ ಬಹುತೇಕ ಡ್ಯಾಂಗಳ ನಿರ್ಮಾಣದ ಕಾಮಗಾರಿ ನಡೆಸಿದ್ದರು. ಅಂದಿನ ಶಾಸಕ ಎಚ್.ಕೆ.ಶಿವರುದ್ರಪ್ಪನನವರ ಆಪ್ತರಾಗಿದ್ದ ಶಿವಮಲ್ಲಪ್ಪ ರಾಜ್ಯದ ನೀರಾವರಿ ಮಂತ್ರಿಯಾಗಿದ್ದ ಎಚ್.ಎಂ.ಚನ್ನಬಸಪ್ಪನವರ ಒಡನಾಡಿಯಾಗಿದ್ದರು. ಈ ಸಂದರ್ಭದಲ್ಲಿ ತಾಲೂಕಿನ ಕಲ್ಲುಕಟ್ಟೆ ಜಲಾಶಯ, ಹುತ್ತೂರು ಕೆರೆ, ಚಾಮರಾಜನಗರ ತಾಲೂಕಿನ ಸುವರ್ಣಾನಗರ ಕೆರೆ ಸೇರಿದಂತೆ ಸುಮಾರು 8 ತಾಲೂಕುಗಳಲ್ಲಿ 25ಕ್ಕೂ ಹೆಚ್ಚಿನ ದೊಡ್ಡ ದೊಡ್ಡ ಕೆರೆಗಳ ನಿರ್ಮಾಣ ಕಾಮಗಾರಿ ನಿರ್ವಹಿಸಿದ್ದರು.
ಸರ್ಕಾರಿ ಹೌಸಿಂಗ್ ಬೋರ್ಡ್ ವತಿಯಿಂದ ಮೈಸೂರಿನ ಅಶೋಕಪುರಂನಲ್ಲಿ ಹಾಗೂ ಪಟ್ಟಣದ ಮಹದೇವಪ್ರಸಾದ್ ನಗರದಲ್ಲಿ ಬಡ ಜನತೆಗೆ ನೂರಾರು ಮನೆಗಳನ್ನು ಕಟ್ಟಿಸಿದ್ದರು.
1992ರಲ್ಲಿ ತಾಲೂಕು ಬೋರ್ಡ್ ಅಧ್ಯಕ್ಷ ಹಾಗೂ ಎರಡು ಬಾರಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾಗಿದ್ದ ಶಿವಮಲ್ಲಪ್ಪ ಅವಿಭಜಿತ ಮೈಸೂರು ಜಿಲ್ಲಾ ಪಂಚಾಯಿತಿಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜನತಾದಳದ ಎಂ.ಪಿ.ವೃಷಭೇಂದ್ರಪ್ಪ ವಿರುದ್ದ ಕೇವಲ 55 ಮತಗಳಿಂದ ಪರಾಭವಗೊಂಡಿದ್ದರು. 1994ರಲ್ಲಿ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಜನತಾದಳದ ಅಭ್ಯರ್ಥಿ ಎಚ್.ಎಸ್.ಮಹದೇವಪ್ರಸಾದ್ ವಿರುದ್ದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮತ್ತು 1999ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದರು.
ನಂತರ ಸಕ್ರಿಯ ರಾಜಕಾರಣದಲ್ಲಿದ್ದರೂ ಮುಂದಿನ ರಾಜಕೀಯ ಭವಿಷ್ಯಕ್ಕಾಗಿ 2008ರಲ್ಲಿ ತಮ್ಮ ಮಗ ಸಿ.ಎಸ್.ನಿರಂಜನಕುಮಾರ್ ಅವರೊಂದಿಗೆ ಬಿಜೆಪಿ ಸೇರಿದ್ದರು.ಕೆನಡಾದಲ್ಲಿರುವ ಪುತ್ರಿ ಆಗಮಿಸಿದ ನಂತರ ಶುಕ್ರವಾರ ಚೌಡಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಗಣ್ಯರಿಂದ ಕಂಬನಿ: ಶಿವಮಲ್ಲಪ್ಪ ಅವರ ನಿಧನಕ್ಕೆ ಮಾಜಿ ಸಚಿವೆ ಡಾ.ಗೀತಾಮಹದೇವಪ್ರಸಾದ್, ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಸಂತಾಪ ಸೂಚಿಸಿದ್ದಾರೆ. ಪುರಸಭೆ ಮಾಜಿ ಅಧ್ಯಕ್ಷ ಪಿ.ಗಿರೀಶ್, ಬಿಜೆಪಿ ಮಂಡಲಾಧ್ಯಕ್ಷ ಸಿ.ಮಹದೇವಪ್ರಸಾದ್, ಮಾಜಿ ಅಧ್ಯಕ್ಷ ಎಲ್.ಸುರೇಶ್, ಎಂ.ಮಲ್ಲೇಶ್, ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಕಮರಹಳ್ಳಿ ರವಿ, ಚಾಮುಲ್ ನಿರ್ದೇಶಕ ಎಚ್.ಎಸ್.ನಂಜುಂಡಪ್ರಸಾದ್ ಸೇರಿದಂತೆ ಹಲವು ಗಣ್ಯರು ಚೌಡಹಳ್ಳಿಗೆ ತೆರಳಿ ಅಂತಿಮ ದರ್ಶನ ಪಡೆದರು.