

ತುಮಕೂರು: ಭಾರತೀಯ ಒಲಂಪಿಕ್ ಸಂಸ್ಥೆ ಸದಸ್ಯತ್ವ ಪಡೆದಿರುವ ಯೋಗಾಸನ ಭಾರತ್, ಕರ್ನಾಟಕ ಯೋಗಾಸನ ಸ್ಪೋರ್ಟ್ಸ್ ಅಸೋಸಿಯೇಷನ್ ಹಾಗೂ ಎಸ್ಜಿ ಎಸ್ ಅಂತಾರಾಷ್ಟ್ರೀಯ ಯೋಗ ಪ್ರತಿಷ್ಠಾನ ವಿದ್ಯಾಲಯ ಸಹಯೋಗದಲ್ಲಿ ತುಮಕೂರಿನಲ್ಲಿ ಡಿ.12 ರಿಂದ 15ರವರೆಗೆ 5ನೇ ಹಿರಿಯ ರಾಷ್ಟ್ರೀಯ ಯೋಗಾಸನ ಕ್ರೀಡಾ ಚಾಂಪಿಯನ್ಶಿಪ್ ಏರ್ಪಡಿಸಲಾಗಿದೆ.
ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ನಡೆಯಲಿರುವ ಯೋಗಾ ಚಾಂಪಿಯನ್ಶಿಪ್ನಲ್ಲಿ ಒಟ್ಟು 32 ತಂಡಗಳಿಂದ ಮಹಿಳೆಯರು, ಪುರುಷರು ಎರಡು ವಿಭಾಗದ 800ಕ್ಕೂ ಹೆಚ್ಚು ಕ್ರೀಡಾಪಟುಗಳು, 80 ಕ್ಕೂ ಹೆಚ್ಚು ತೀರ್ಪುಗಾರರು ಹಾಗೂ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಯೋಗಾಸಂಸ್ಥೆಯ ಅಧಿಕಾರಿಗಳು ಭಾಗವಹಿಸುತ್ತಿದ್ದು ರಾಷ್ಟ್ರೀಯ ಯೋಗಾ ಚಾಂಪಿಯನ್ಶಿಪ್ಗೆ ತುಮಕೂರು ಆತಿಥ್ಯ ವಹಿಸುತ್ತಿದ್ದು ಕ್ರೀಡೆಯಾಗಿ ಯೋಗವನ್ನು ಎಲ್ಲರೂ ಪ್ರೋತ್ಸಾಹಿಸುವಂತೆ ಎಂದು ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ಸೋಮವಾರ ಸುದ್ದಿಗೋಷ್ಠಿಯಲ್ಲಿ ಕರೆನೀಡಿದರು.
ತುಮಕೂರಿನಲ್ಲಿ ರಾಷ್ಟ್ರಮಟ್ಟದ ಯೋಗಾಸನ ಸ್ವರ್ಧೆ ನಡೆಯುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಉತ್ತಮ ಆರೋಗ್ಯದ ದೃಷ್ಟಿಯಿಂದ ಯೋಗಾಸನ ಒಳ್ಳೆಯದು. ಜಗತ್ತಿನಲ್ಲಿ ಯೋಗ ಬಹಳ ಪ್ರಸಿದ್ದಿ ಪಡೆದಿದೆ. ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಯೋಗ ಮಾಡುವುದು ಸಹಕಾರಿಯಾಗಲಿದೆ. ಸರ್ಕಾರಗಳು ಎಲ್ಲಾ ರೀತಿಯ ನೆರವನ್ನು ನೀಡುತ್ತಿದ್ದು, ಜಿಲ್ಲಾಡಳಿತ ಸಂಪೂರ್ಣವಾಗಿ ತೊಡಗಿಸಿಕೊಂಡಿದೆ. ಮುಂಬರುವ 2030ರ ಏಷ್ಯಾ ಗೇಮ್ಸ್ ಮತ್ತು 2036ರ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಯೋಗಾಸನ ಸ್ಪರ್ಧೆಯನ್ನು ಪ್ರದರ್ಶನ ಕ್ರೀಡೆಯಾಗಿ ಭಾಗವಹಿಸಲು ಅವಕಾಶ ನೀಡಿರುವುದು ಸಂತೋಷದ ವಿಚಾರವಾಗಿದೆ. ನಾಲ್ಕು ದಿನಗಳ ಈ ಸ್ವರ್ಧೆ ಯಶಸ್ವಿಯಾಗಲಿ ಎಂದು ಆಶೀರ್ವದಿಸಿದರು.
2020 ರಲ್ಲಿ ಕೇಂದ್ರ ಸರಕಾರ ಯೋಗವನ್ನು ಕ್ರೀಡೆ ಎಂದು ಮಾನ್ಯ ಮಾಡಿದ ನಂತರ ಇದುವರೆಗೂ ನಾಲ್ಕು ರಾಷ್ಟ್ರೀಯ ಯೋಗಾಸನ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಡಿ.12 ರಿಂದ 15 ರವರಗೆ ತುಮಕೂರಿನ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಐದನೇ ಹಿರಿಯರ ರಾಷ್ಟ್ರೀಯ ಯೋಗಾಸನ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. 31ರಾಜ್ಯಗಳ ತಲಾ ಒಂದೊಂದು ಪುರುಷ ಮತ್ತು ಮಹಿಳಾ ತಂಡಗಳ ಜೊತೆಗೆ, ನ್ಯಾಷನಲ್ ಪೊಲೀಸ್ ಅಕಾಡೆಮಿಯ ಒಂದು ತಂಡ ಸೇರಿ 32 ತಂಡಗಳ ನಾಲ್ಕು ನೂರು ಮಹಿಳಾ ಮತ್ತು ನಾಲ್ಕು ನೂರು ಪುರುಷ ಒಟ್ಟು 800 ಕ್ರೀಡಾಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಕ್ರೀಡಾಪಟುಗಳಿಗೆ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ವಾಸ್ತವ್ಯ ವ್ಯವಸ್ಥೆ ಮಾಡಲಾಗಿದೆ. ಅಧಿಕಾರಿಗಳಿಗೆ ಮಠದ ಯಾತ್ರಿನಿವಾಸದಲ್ಲಿ ತಂಗಲು ಅವಕಾಶ ಕಲ್ಪಿಸಲಾಗಿದೆ. ಎಲ್ಲರಿಗೂ ಊಟದ ವ್ಯವಸ್ಥೆಯನ್ನು ಕ್ರೀಡಾಂಗಣದಲ್ಲಿಯೇ ನಡೆಸಲಾಗುವುದು ಎಂದು ಕರ್ನಾಟಕ ಯೋಗಾಸನ ಸಂಸ್ಥೆಯ ಕಾರ್ಯದರ್ಶಿ ಡಾ.ಎಂ.ನಿರಂಜನಮೂರ್ತಿ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ, ಶ್ರೇಯಸ್, ಪರುಶುರಾಮಪ್ಪ, ಕವಿತಾ, ದಿವ್ಯಾ, ರವಿ ಹಾಜರಿದ್ದರು.
ಡಿ.12 ರಂದು ಬೆಳಗ್ಗೆ 9 ಗಂಟೆಗೆ ಐದನೇ ಹಿರಿಯ ರಾಷ್ಟ್ರೀಯ ಯೋಗಾಸನ ಕ್ರೀಡಾ ಚಾಂಪಿಯನ್ಶಿಪ್ಗೆ ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಚಾಲನೆ ನೀಡುವರು. ಮಾಜಿ ಸಚಿವರಾದ ಸೊಗಡು ಶಿವಣ್ಣ, ಏಷಿಯನ್ ಯೋಗಾಸನದ ಉಪಾಧ್ಯಕ್ಷರು ಆದ ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆಯ ಕಾರ್ಯದರ್ಶಿ ಡಾ. ಎಂ ನಿರಂಜನ ಮೂರ್ತಿ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ರೋಹಿತ್ ಗಂಗಾಧರ್ ಮತ್ತಿತರರು ಉಪಸ್ಥಿತರಿರುವರು.