

ವಿಜಯಪುರ: ದತ್ತಿ ಉಪನ್ಯಾಸಗಳಿಂದ ಮಕ್ಕಳ ಜ್ಞಾನ ವೃದ್ಧಿಯಾಗುತ್ತದೆ ಎಂದು ಕೊಲ್ಹಾರ ಪಟ್ಟಣದ ಹಿರಿಯ ಸಾಹಿತಿ ಬೋರಮ್ಮ ಪತಂಗಿ ಅಭಿಪ್ರಾಯ ವ್ಯಕ್ತಪಡಿಸಿದರು.
ಬಬಲೇಶ್ವರ ತಾಲೂಕಿನ ಕಾರಜೋಳದ ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಹಾಗೂ ಬಬಲೇಶ್ವರ ತಾಲೂಕು ಘಟಕದ ಸಹಯೋಗದಲ್ಲಿ ಮಾತೋಶ್ರೀ ಗುರವ್ವ ಶಿವಲಿಂಗಪ್ಪ ಹೊರಟ್ಟಿ, ಅನಿಲ ದೇಸಾಯಿ, ಶಂಕರಲಿಂಗಪ್ಪ ದೊಡ್ಡಪ್ಪ ಮಾದನಶೆಟ್ಟಿ ಹಾಗೂ ಬಂಥನಾಳ ಸಂಗನಬಸವ ಸ್ವಾಮೀಜಿ ಸ್ಮರಣೆ ಅಂಗವಾಗಿ ಗುರುವಾರ ನಡೆದ ದತ್ತಿ ಉಪನ್ಯಾಸ ಉದ್ಘಾಟಿಸಿ ಅವರು ಮಾತನಾಡಿದರು.
ದತ್ತಿ ಉಪನ್ಯಾಸ ಅತ್ಯಂತ ಉಪಯುಕ್ತವಾಗಿದೆ. ಇಂಥ ಕಾರ್ಯಕ್ರಮದಲ್ಲಿ ಭಾಗವಹಿಸಿ ಜ್ಞಾನ ವೃದ್ಧಿಸಿಕೊಳ್ಳಬೇಕು. ಅದರಲ್ಲೂ ಮಕ್ಕಳ ಸಾಹಿತ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಾಗುತ್ತಿದ್ದು, ಇದರ ಸದುಪಯೋಗವಾಗಲಿ ಎಂದರು.
ಸಾನ್ನಿಧ್ಯ ವಹಿಸಿದ್ದ ಕಲಗುರ್ಕಿಯ ದಯಾನಂದ ಹಿರೇಮಠ ಸ್ವಾಮೀಜಿ ಮಾತನಾಡಿ, ಗ್ರಾಮೀಣ ಮಟ್ಟದಲ್ಲೂ ಕನ್ನಡ ಸಾಹಿತ್ಯ ಪರಿಷತ್ ಚಟುವಟಿಕೆ ನಡೆಯುತ್ತಿರುವುದು ಸಂತಸ ತಂದಿದೆ ಎಂದರು.
ವಿಜಯಪುರ ಜಿಒಸಿಸಿ ಬ್ಯಾಂಕ್ ನಿರ್ದೇಶಕಿ ನೀಲಾ ಇಂಗಳೆ ಆಕಾಶವಾಣಿ ಹಾಗೂ ರಂಗಭೂಮಿ ಕಲಾವಿದರ ಮಹತ್ವ ಕುರಿತು ಮಾತನಾಡಿದರು.
ನ್ಯಾಯವಾದಿ ಮಹಮ್ಮದ ಗೌಸ್ ಹವಾಲ್ದಾರ್ ಬಂಥನಾಳದ ಸಂಗನಬಸವ ಸ್ವಾಮೀಜಿಯವರ ಶೈಕ್ಷಣಿಕ ಕೊಡುಗೆ ಕುರಿತು ಉಪನ್ಯಾಸ ನೀಡಿದರು.
ಕಾರಜೋಳ ರಾಣಿ ಚನ್ನಮ್ಮ ವಸತಿ ಶಾಲೆ ಪ್ರಾಚಾರ್ಯ ಎಂ.ಎಚ್. ಬೀಳಗಿ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ, ಬಬಲೇಶ್ವರ ತಾಲೂಕು ಅಧ್ಯಕ್ಷ ಅಶೋಕ ಆಸಂಗಿ, ಜಿಲ್ಲಾ ದತ್ತಿ ಸಂಚಾಲಕ ರಾಜೇಸಾಬ ಶಿವನಗುತ್ತಿ, ಕೃಷ್ಣಾನಂದ ಭೀರಗೊಂಡ, ಸದಾಶಿವ ಮಮದಾಪೂರ, ಚಂದ್ರಶೇಖರ ಹಂಚನಾಳ, ದಾನಮ್ಮ ಪಾಟೀಲ, ಶ್ರೀಮಂತ ದನ್ಯಾಳ, ಸುವರ್ಣಾ ಪತ್ತಾರ, ಪ್ರಶಾಂತ ಶಿಂಧೆ, ಹಣಮಂತರಾಯ ಪಾಟೀಲ, ಕವಿತಾ ಹೂಗಾರ, ಮುಜೀಬ ಜಹಾಗೀರದಾರ, ಸಬಲಬಿ ಮುಜಾವರ, ಹೀನಾಕೌಸರ ಕಡಕೋಳ, ಮುಸ್ತಪಾ ಬೇಪಾರಿ, ಶರಣವ್ವ ಅರಳಗುಂಡಗಿ, ಚಂದ್ರಕಲಾ ಅರಳದಿನ್ನಿ, ಚಂದ್ರಶೇಖರ ಸಿನ್ನೂರ, ಅನಿಲ ಯಳಮೇಲಿ ಉಪಸ್ಥಿತರಿದ್ದರು.