ಜನತಾ ಪರಿವಾರದ ಹಿರಿಯ ಕೊಂಡಿ, ಜೆಡಿಎಸ್ ನಾಯಕ ಅಮರನಾಥ ಶೆಟ್ಟಿ ಇನ್ನಿಲ್ಲ

AMARANATHA SHETTY
Published on

ಮೂಡುಬಿದಿರೆ: ಸಜ್ಜನ ರಾಜಕಾರಣಿಯೆಂದೇ ಹೆಸರಾದ ಜನತಾ ಪರಿವಾರದ ಹಿರಿಯ ಕೊಂಡಿ, ಜೆಡಿಎಸ್ ನಾಯಕ, ಶಿಕ್ಷಣ, ಧಾರ್ವಿುಕ, ಸಹಕಾರಿ ಕ್ಷೇತ್ರದ ಧುರೀಣ, ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ(80) ಅನಾರೋಗ್ಯದಿಂದ ಸೋಮವಾರ ಬೆಳಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾದರು. ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ಕುಮಾರ್ ಕಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದೆ ಶೋಭಾ ಕರಂದ್ಲಾಜೆ ಮತ್ತಿತರರು ಅಂತಿಮ ದರ್ಶನ ಪಡೆದರು.

ಪಾಲಡ್ಕದ ಮುಂಡ್ರುದೆಗುತ್ತುವಿನಲ್ಲಿ ಮಂಗಳವಾರ ಬೆಳಗ್ಗೆ 10.30ಕ್ಕೆ ಸಕಲ ಸರ್ಕಾರಿ ಗೌರವಗಳೊಂದಿಗೆ ಪಾರ್ಥಿವ ಶರೀರದ ಅಂತ್ಯಕ್ರಿಯೆ ನಡೆಯಲಿದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭಾಗವಹಿಸಲಿದ್ದಾರೆ ಎಂಬ ಮಾಹಿತಿ ಇದೆ.

10 ಸ್ಪರ್ಧೆ, 3 ಗೆಲುವು: ಕೊಡ್ಮಣ್​ಗುತ್ತಿನ ಕಾಂತಣ್ಣ ಶೆಟ್ಟಿ- ಪಾಲಡ್ಕ ಮುಂಡ್ರುದೆಗುತ್ತಿನ ರತ್ನಾವತಿ ಶೆಟ್ಟಿ ದಂಪತಿಗೆ 1940ರ ಏ.22ರಂದು ಜನಿಸಿದ ಅಮರನಾಥಶೆಟ್ಟಿ ಅವರದ್ದು ಶ್ರೀಮಂತ ಗುತ್ತು ಮನೆತನ, ಕೃಷಿ ಹಿನ್ನೆಲೆಯ ಕುಟುಂಬ.

ಪಂಚಾಯಿತಿ, ಪುರಸಭೆ ಚುನಾವಣೆಗಳಲ್ಲಿ ಗೆದ್ದು ಸಂಸ್ಥಾ ಕಾಂಗ್ರೆಸ್ ಮೂಲಕ ವಿಧಾನಸಭೆಗೆ ಮೊದಲ ಬಾರಿ ಸ್ಪರ್ಧಿಸಿ ಸೋಲುಂಡ ಅವರು, ಎರಡನೇ ಬಾರಿ ಜನತಾ ಪಕ್ಷದಿಂದ ಸ್ಪರ್ಧಿಸಿಯೂ ವಿಧಾನಸಭೆ ಪ್ರವೇಶ ಸಾಧ್ಯವಾಗಿರಲಿಲ್ಲ. ಒಟ್ಟು 10 ಬಾರಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ ಅವರು ಮೂರು ಬಾರಿ ಗೆದ್ದಿದ್ದು, ಮೂರು ಬಾರಿಯೂ ಸಚಿವರಾಗಿದ್ದರು. 1983ರಲ್ಲಿ ರಾಮಕೃಷ್ಣ ಹೆಗಡೆ ಸರ್ಕಾರದಲ್ಲಿ ಮುಜರಾಯಿ, 1985ರಲ್ಲಿ ಕಾರ್ವಿುಕ, ಯುವಜನ ಸೇವೆ, ಪ್ರವಾಸೋದ್ಯಮ ಹಾಗೂ 1994ರಲ್ಲಿ ಜೆ.ಎಚ್.ಪಟೇಲ್ ಸಂಪುಟದಲ್ಲಿ ಸಚಿವರಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net