

ಕೆಆರ್‌ಎಸ್: ವಿಶ್ವವಿಖ್ಯಾತ ಕೃಷ್ಣರಾಜಸಾಗರ ಅಣೆಕಟ್ಟೆಯಲ್ಲಿ ಅಮ್ಯೂಸ್ಮೆಂಟ್ ಮಾದರಿ ಥೀಮ್ ಪಾರ್ಕ್ ಹಾಗೂ ಕಾವೇರಿ ಆರತಿ ಯೋಜನೆ ಅನುಷ್ಠಾನಕ್ಕೆ ಮುಂದಾಗಿರುವ ರಾಜ್ಯಸರ್ಕಾರ ನಿಲುವು ಖಂಡಿಸಿ ನ್ಯಾಯಾಲಯದ ಮೆಟ್ಟಿಲೇರಲಾಗಿದೆ. ಇದರ ಬೆನ್ನಲ್ಲೇ ಹಿರಿಯ ವಕೀಲರು ಹಾಗೂ ರೈತ ಪರ ಹೋರಾಟಗಾರರು ಕೆಆರ್‌ಎಸ್‌ಗೆ ಭೇಟಿ ನೀಡಿ ಅಧ್ಯಯನ ನಡೆಸಿ ಹಲವು ಮಹತ್ವದ ಮಾಹಿತಿ ಸಂಗ್ರಹಿಸಿದ್ದಾರೆ. ಅಮ್ಯೂಸ್ಮೆಂಟ್ ಪಾರ್ಕ್ ಯೋಜನೆಗೆ ಟೆಂಡರ್ ಕರೆದಿರುವ ಹಿನ್ನೆಲೆಯಲ್ಲಿ ಮಂಡ್ಯ ತಾಲೂಕು ಗೋಪಾಲಪುರ ಗ್ರಾಮದ ಹಿರಿಯ ರೈತ ಮುಖಂಡ ಕೆ.ಬೋರಯ್ಯ ಸೇರಿದಂತೆ ಐವರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತ ಅರ್ಜಿಯನ್ನು ಸಲ್ಲಿಸಿದ್ದಾರೆ. ಈಗಾಗಲೇ ವಿಚಾರಣೆ ನಡೆದು ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಹೋರಾಟಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಮಾಹಿತಿ ನೀಡಲು ವಕೀಲರು ಹಾಗೂ ರೈತರ ನಿಯೋಗ ಕೆಆರ್‌ಎಸ್‌ಗೆ ಭೇಟಿ ನೀಡಿದೆ. ಡ್ಯಾಂ ವಸ್ತು ಸ್ಥಿತಿ, ಅಣೆಕಟ್ಟೆಯ ಭದ್ರತೆ, ಸುತ್ತಮುತ್ತಲ ಪ್ರದೇಶ, ಪರಿಸರ ಹಾಗೂ ಯೋಜನೆಗಳಿಂದಾಗುವ ಪರಿಣಾಮದ ಜತೆಗೆ ನೀರು ಕಲುಷಿತಗೊಳ್ಳುವುದು, ಸಾಮಾಜಿಕ ದುಷ್ಪರಿಣಾಮ, ಇಲ್ಲಿನ ಸಂಸ್ಕೃತಿ, ಸ್ಥಳೀಯ ನಾಗರಿಕತೆ ಬಗ್ಗೆ ಮಹತ್ವದ ಮಾಹಿತಿ ಸಂಗ್ರಹಿಸಿದೆ. ಸುಪ್ರೀಂ ಕೋರ್ಟ್ ನ್ಯಾಯವಾದಿಗಳಾದ ವಿದ್ಯಾಸಾಗರ್, ಸಂಜಯ್ ನೂಲಿ, ಹೈಕೋರ್ಟ್‌ನ ಹಿರಿಯ ವಕೀಲರಾದ ಕೆ.ಶಿವಪ್ರಕಾಶ್, ಎಂ.ಎಲ್.ಪಾಂಡುರಂಗಸ್ವಾಮಿ, ವಕೀಲ ಕೆ.ಎಸ್.ರಘು, ಕೆಆರ್‌ಎಸ್ ಗ್ರಾಪಂ ಉಪಾಧ್ಯಕ್ಷ ಪಾಪಣ್ಣ, ಸದಸ್ಯರಾದ ಮಂಜುನಾಥ್, ರವಿಶಂಕರ್, ನರಸಿಂಹ, ಮುಖಂಡರಾದ ರಾಜು, ಕೃಷ್ಣ, ರೈತ ಹೋರಾಟಗಾರ್ತಿ ಸುನಂದಾ ಜಯರಾಂ, ಕೆ.ಬೋರಯ್ಯ, ಇಂಡುವಾಳು ಚಂದ್ರಶೇಖರ್, ನಾರಾಯಣ್, ಮುದ್ದೇಗೌಡ, ನಿವೃತ್ತ ಇಂಜಿನಿಯರ್ ಕೆಂಪೇಗೌಡ, ಬೋರಲಿಂಗೇಗೌಡ, ಹಲ್ಲೇಗೆರೆ ಶಿವರಾಂ, ಕೃಷ್ಣಪ್ರಸಾದ್, ಜಯರಾಂ, ದೇವೇಗೌಡ, ಫಯಾಜ್, ಜವರೇಗೌಡ, ಕಮಲಾ, ಸತ್ಯಭಾಮಾ ಇತರರಿದ್ದರು.
ಅಮ್ಯೂಸ್ಮೆಂಟ್ ಪಾರ್ಕ್ ಯೋಜನೆ ವಿರೋಧಿಸಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತ ಅರ್ಜಿ ಸಲ್ಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಮಾಹಿತಿ ನೀಡಲು ಅಧ್ಯಯನ ನಡೆಸಲಾಗಿದೆ. ನಮ್ಮ ವಕೀಲರು ಮಹತ್ವದ ಮಾಹಿತಿ ಸಂಗ್ರಹಿಸಿದ್ದು, ಮುಂದಿನ ವಿಚಾರಣೆಯಲ್ಲಿ ಮಂಡಿಸಲಿದ್ದಾರೆ. ಕೆ.ಬೋರಯ್ಯ ಹಿರಿಯ ರೈತ ಮುಖಂಡ