

ಜಮಖಂಡಿ: ಬಾಗಲಕೋಟೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಜಿಲ್ಲಾ ಮತ್ತು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಜಮಖಂಡಿ ನಗರದಲ್ಲಿ ಜಿಲ್ಲಾ ಪತ್ರಕರ್ತರ ಸಮ್ಮೇಳನ ಏರ್ಪಡಿಸಲು ನಿರ್ಧರಿಸಲಾಗಿದ್ದು, ಹಿರಿಯ ಪತ್ರಕರ್ತ ಎಂ.ಸಿ. ಗೊಂದಿ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಹೇಳಿದರು.
ನಗರದ ಅವರ ನಿವಾಸದಲ್ಲಿ ಎಂ.ಸಿ. ಗೊಂದಿ ಅವರನ್ನು ಭಾನುವಾರ ಸನ್ಮಾನಿಸಿ ಅವರು ಮಾತನಾಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಜಮಖಂಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಜಿಲ್ಲಾ ಪತ್ರಕರ್ತರ ಸಂಘ, ಜಮಖಂಡಿ ಪತ್ರಕರ್ತರ ಸಂಘದ ಪದಾಧಿಕಾರಿಗಳು ಸೇರಿ ಜಮಖಂಡಿ ಪತ್ರಕರ್ತರ ಸಂಘದ ಕಾರ್ಯಾಲಯದಲ್ಲಿ ಸಭೆ ನಡೆಸಿ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಗಿದೆ. ಜುಲೈನಲ್ಲಿ ಸಮ್ಮೇಳನ ನಡೆಯಲಿದೆ. ಒಂದು ದಿನದ ಸಮ್ಮೇಳನದಲ್ಲಿ ಅಧ್ಯಕ್ಷರ ಮೆರವಣಿಗೆ, ಉದ್ಘಾಟನಾ ಸಮಾರಂಭ, ಮಾಧ್ಯಮ ವಿಷಯ ಕುರಿತ ಗೋಷ್ಠಿ, ಸಾಧಕರಿಗೆ ಸನ್ಮಾನ, ಸಮಾರೋಪ ಸಮಾರಂಭ ಆಯೋಜಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಆನಂದ ಧಲಬಂಜನ ಮಾತನಾಡಿ, ಸಮ್ಮೇಳನವನ್ನು ಅದ್ದೂರಿಯಾಗಿ ನಡೆಸಲಾಗುವುದು. ನಾಡಿನ ಹಿರಿಯ ಪತ್ರಕರ್ತರು ಭಾಗವಹಿಸುವರು ಎಂದು ತಿಳಿಸಿದರು.
ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ಹೆಗ್ಗಳಗಿ ಮಾತನಾಡಿ, ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದ ಗೊಂದಿ ಅವರು ಜನಪರ ಹೋರಾಟದ ಮೂಲಕ ಬೆಳೆದವರು. ಉತ್ತರಕರ್ನಾಟಕ ಭಾಗದಲ್ಲಿ ಬಹಳ ಪತ್ರಕರ್ತರನ್ನು ಬೆಳೆಸಿದ್ದಾರೆ ಎಂದರು.
ಮುಖಂಡ ಹಾಜಿ ಇಲಾಹಿ ಕಂಗನೊಳ್ಳಿ ಮಾತನಾಡಿ, ಸಮ್ಮೇಳನಕ್ಕೆ ವೈಯಕ್ತಿಕವಾಗಿ 51 ಸಾವಿರ ರೂಗಳನ್ನು ನೀಡುವುದಾಗಿ ತಿಳಿಸಿದರು.
ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯ ಮಹೇಶ ಅಂಗಡಿ, ತಾಲೂಕು ಕಸಾಪ ಅಧ್ಯಕ್ಷ ಸಂತೋಷ ತಳಕೇರಿ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಅಪ್ಪು ಪೂತರಾಜ್, ಎಂ.ಕೆ. ಮೆಗಾಡಿ, ಆರ್.ಎಸ್. ಅಕ್ಕಿ, ತಾತಾಸಾಹೇಬ್ ಬಾಂಗಿ, ಎನ್.ಎಸ್. ದೇವರವರ್, ಸಿದ್ದಣ್ಣ ಉತ್ನಾಳ, ಬಸವರಾಜ ಯಡಹಳ್ಳಿ, ಬಸವರಾಜ ಕಡ್ಡಿ, ರುದ್ರಗೌಡ ಪಾಟೀಲ್, ಶಂಕರ ಹನಗಂಡಿ, ಗುರುನಾಥ ಸುತಾರ, ಡಾ.ಎಸ್.ಬಿ. ಮಟೋಳಿ, ಭ.ನಿಂ. ಅಸ್ಕಿ, ವಿಜಯ ಬಿರಾದಾರ, ಶಿವಾನಂದ ಕೊಣ್ಣೂರ, ಮಲ್ಲಿಕಾರ್ಜುನ ಮಠ, ಎಂ.ಎನ್.ನದಾಪ, ನಾಗೇಶ ಜತ್ತಿ, ಪೀರಸಾಬ ಕೊಡತಿ, ಮೊಹನ ಸಾವಂತ, ಅಯ್ಯೂಬ್ ಕೊರತಿ, ಲಕ್ಷ್ಮೀಕಾಂತ ದುದಗಿ, ವಿನೋದ ಲೋಣಿ ಇತರರಿದ್ದರು.