ಹಿರಿಯ ಪತ್ರಕರ್ತ, ಲೇಖಕ ಟಿಜೆಎಸ್ ಜಾರ್ಜ್ ನಿಧನ| TJS George passes away

tjsgeorge
Published on

ಬೆಂಗಳೂರು: ಖ್ಯಾತ ಪತ್ರಕರ್ತ ಮತ್ತು ಲೇಖಕ ಟಿಜೆಎಸ್ ಜಾರ್ಜ್ ಎಂದೇ ಜನಪ್ರಿಯರಾಗಿದ್ದ ಥೈಲ್ ಜಾಕೋಬ್ ಸೋನಿ ಜಾರ್ಜ್ ಇಂದು (ಅ.03) ತಮ್ಮ 97ನೇ ವಯಸ್ಸಿನಲ್ಲಿ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.

ಇವರು ತಮ್ಮ ತೀಕ್ಷ್ಣವಾದ ವ್ಯಾಖ್ಯಾನ ಮತ್ತು ನಿರ್ಭೀತ ಸ್ವಾತಂತ್ರ್ಯದ ಮೂಲಕ ಭಾರತೀಯ ಇಂಗ್ಲಿಷ್ ಪತ್ರಿಕೋದ್ಯಮದಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದ ಹಿರಿಯ ಪತ್ರಕರ್ತರಾಗಿದ್ದರು. ಇನ್ನೂ ಇವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. 2011 ರಲ್ಲಿ, ಕೇಂದ್ರ ಸರ್ಕಾರವು ಟಿಜೆಎಸ್ ಅವರಿಗೆ ಸಾಹಿತ್ಯ ಮತ್ತು ಪತ್ರಿಕೋದ್ಯಮಕ್ಕೆ ನೀಡಿದ ಅತ್ಯುತ್ತಮ ಕೊಡುಗೆಗಳಿಗಾಗಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.

ಹಿರಿಯ ಪತ್ರಕರ್ತ, ಸಂಪಾದಕ ಮತ್ತು ಲೇಖಕ ಟಿಜೆಎಸ್ ಜಾರ್ಜ್ ಅವರ ನಿಧನದಿಂದ ದುಃಖಿತನಾಗಿದ್ದೇನೆ. ತಮ್ಮ ತೀಕ್ಷ್ಣವಾದ ಲೇಖನಿ ಮತ್ತು ರಾಜಿಯಾಗದ ಧ್ವನಿಯಿಂದ ಅವರು ಆರು ದಶಕಗಳಿಗೂ ಹೆಚ್ಚು ಕಾಲ ಭಾರತೀಯ ಪತ್ರಿಕೋದ್ಯಮವನ್ನು ಶ್ರೀಮಂತಗೊಳಿಸಿದರು. ಓದುಗರನ್ನು ಯೋಚಿಸುವಂತೆ, ಪ್ರಶ್ನಿಸುವಂತೆ ಮತ್ತು ತೊಡಗಿಸಿಕೊಳ್ಳುವಂತೆ ಮಾಡಿದ ನಿಜವಾದ ಸಾರ್ವಜನಿಕ ಬುದ್ಧಿಜೀವಿ ಅವರು. ಅವರ ಕುಟುಂಬ, ಸಹೋದ್ಯೋಗಿಗಳು ಮತ್ತು ಅಸಂಖ್ಯಾತ ಅಭಿಮಾನಿಗಳಿಗೆ ನನ್ನ ಹೃತ್ಪೂರ್ವಕ ಸಂತಾಪಗಳು ಎಂದು ಸಿಎಂ ಸಿದ್ದರಾಮಯ್ಯ ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

(ಏಜೆನ್ಸೀಸ್)

ಖ್ಯಾತ ಪತ್ರಕರ್ತ ಟಿ.ಜೆ.ಎಸ್ ಜಾರ್ಜ್ ಅವರು ನಿಧನ ಹೊಂದಿರುವ ಸುದ್ದಿ ಕೇಳಿ ಮನಸ್ಸಿಗೆ ಅತ್ಯಂತ ನೋವಾಯಿತು. ಭಾರತೀಯ ಪತ್ರಿಕಾ ರಂಗದಲ್ಲಿ ಸುದೀರ್ಘ ಸೇವೆ ಸಲ್ಲಿಸುವ ಮೂಲಕ ತಮ್ಮದೇ ಆದ ಛಾಪು ಮೂಡಿಸಿದ್ದ ಟಿ.ಜೆ.ಎಸ್. ಜಾರ್ಜ್ ಅವರು ಅಂಕಣಕಾರರಾಗಿ ರಾಜಕೀಯ ವಿದ್ಯಮಾನಗಳ ವಿಶ್ಲೇಷಣೆ ಮೂಲಕ ರಾಜಕೀಯ ವ್ಯವಸ್ಥೆಯನ್ನು ಸದಾ ಜಾಗೃತಗೊಳಿಸುವ ಕೆಲಸ ಮಾಡಿದ್ದರು. ಸುಮಾರು 25 ವರ್ಷಗಳ ಕಾಲ ನಿರಂತರ ಅಂಕಣಕಾರರಾಗಿ ಸಾಮಾಜಿಕ ಅಸಮಾನತೆ, ಭ್ರಷ್ಟಾಚಾರದ ವಿರುದ್ದ ನಿರಂತರ ತಮ್ಮ ಲೇಖನಿ ಮೂಲಕ ಧ್ವನಿ ಎತ್ತುವ ಕೆಲಸ ಮಾಡಿದ್ದರು. ಅವರ ಅಗಲಿಕೆಯಿಂದ ಭಾರತೀಯ ಪತ್ರಿಕಾರಂಗ ಒಬ್ಬ ಹಿರಿಯ ಮಾರ್ಗದರ್ಶಕನನ್ನು ಕಳೆದುಕೊಂಡಂತಾಗಿದೆ. ಅವರು ಸಾಹಿತ್ಯ ಮತ್ತು ಪತ್ರಿಕಾ ರಂಗದಲ್ಲಿ ಸಲ್ಲಿಸಿದ ಸೇವೆಗೆ ಪದ್ಮಭೂಷಣ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಅವರ ಅಗಲಿಕೆಯ ದುಖವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬ ಹಾಗೂ ಅವರ ಅಭಿಮಾನಿಗಳಿಗೆ ಕರುಣಿಸಲಿ, ಮೃತರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪೋಸ್ಟ್​ ಮೂಲಕ ಸಂತಾಪ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net