ಉನ್ನತ ಹುದ್ದೆಗೆ ಏರುವ ಪಿಎಸ್​ಐಗಳ ಕನಸಿಗೆ ತಣ್ಣೀರು

PSI
Published on

ಬೆಂಗಳೂರು: ಪೊಲೀಸ್ ಇಲಾಖೆಗೆ ನೇಮಕಗೊಂಡಿರುವ ಪ್ರೊಬೇಷನರಿ ಸಬ್ ಇನ್​ಸ್ಪೆಕ್ಟರ್​ಗಳು ಯುಪಿಎಸ್​ಸಿ, ಕೆಪಿಎಸ್​ಸಿ ಪರೀಕ್ಷೆ ಬರೆಯದಂತೆ ಹಿರಿಯ ಐಪಿಎಸ್ ಅಧಿಕಾರಿ ಅಡ್ಡಗಾಲು ಹಾಕಿದ್ದಾರೆ. ಅಧಿಕಾರಿಯ ಈ ನಡೆಗೆ ತರಬೇತಿ ನಿರತ ಪಿಎಸ್​ಐಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೊಲೀಸ್ ಇಲಾಖೆಗೆ ಕಾನ್​ಸ್ಟೆಬಲ್ ಮತ್ತು ಸಬ್​ಇನ್​ಸ್ಪೆಕ್ಟರ್ ಹುದ್ದೆಗಳಿಗೆ ಪದವಿ, ಸ್ನಾತ್ತಕೋತ್ತರ ಪದವಿ, ಇಂಜಿನಿಯರಿಂಗ್, ಕಾನೂನು ಪದವಿ ಸೇರಿ ಉನ್ನತ ವ್ಯಾಸಂಗ ಪಡೆದವರು ಹೆಚ್ಚಾಗಿ ಸೇರ್ಪಡೆಗೊಳ್ಳುತ್ತಿದ್ದಾರೆ. ಇವರು ಆನಂತರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ಉನ್ನತ ಹುದ್ದೆಗೆ ಹೋಗುವ ಪದ್ಧತಿ ನಡೆದುಕೊಂಡು ಬಂದಿದೆ. ಇತ್ತೀಚೆಗೆ ಈ ಸಂಖ್ಯೆ ಹೆಚ್ಚಾಗಿದೆ.

ರಾಜ್ಯ ಸರ್ಕಾರದ ಆದೇಶ ಪ್ರಕಾರ ಯಾವುದೇ ಸರ್ಕಾರಿ ನೌಕರನು ಇತರ ಉದ್ಯೋಗ ಆಕಾಂಕ್ಷಿ ಆಗಿದ್ದಾಗ ಕರ್ತವ್ಯನಿರತ ಇಲಾಖೆಯ ಪೂರ್ವಾನುಮತಿ ಪಡೆಯುವ ಅವಶ್ಯಕತೆ ಇರುವುದಿಲ್ಲ. ಇದರಿಂದ ಪರೀಕ್ಷೆಗಳಿಗೆ ಹಾಜರಾಗಲು ಅನುಮತಿ ನೀಡಬೇಕಾಗುತ್ತದೆ. ಅದಕ್ಕೆ ಅಡ್ಡಿ ಪಡಿಸುವಂತಿಲ್ಲ ಎಂದು ಸ್ಪಷ್ಟವಾಗಿದೆ. ಇದು ಎಲ್ಲ ಇಲಾಖೆಯಲ್ಲಿಯೂ ನಡೆಯುತ್ತಿದೆ.

ಪೊಲೀಸ್ ಇಲಾಖೆಯಲ್ಲಿ ತರಬೇತಿನಿರತ ಪಿಎಸ್​ಐ (ಸಿವಿಲ್, ಆರ್​ಎಸ್​ಐ)ಗಳಿಗೆ ಪರೀಕ್ಷೆ ಬರೆಯುವ ಅವಕಾಶ ಮೊಟಕುಗೊಳಿಸಲು ಪ್ರಯತ್ನ ನಡೆಯುತ್ತಿದೆ. ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್​ಗೆ ರಾಜ್ಯ ಪೊಲೀಸ್ ಅಕಾಡೆಮಿ (ಮೈಸೂರು) ನಿರ್ದೇಶಕ ವಿಫುಲ್ ಕುಮಾರ್ ಪತ್ರ ಬರೆದಿದ್ದು, ಪ್ರೋಪೆಷನರಿ ಪಿಎಸ್​ಐಗಳು (ಪ್ರಶಿಕ್ಷಾಣಾರ್ಥಿಗಳು) ಒಂದು ವರ್ಷದ ತರಬೇತಿ ಪಡೆಯುವಾಗ ಇತರ ಸರ್ಕಾರಿ ಹುದ್ದೆಗಳಿಗೆ ಪರೀಕ್ಷೆ ಬರೆಯಲು ಅನುಮತಿ ನೀಡಿದ್ದಲ್ಲಿ ಅವರ ಗಮನ ಬೇರೆಡೆ ಹೋಗುತ್ತದೆ. ತರಬೇತಿ ಅವಧಿಯಲ್ಲಿ ಪರೀಕ್ಷೆಗಳ ತಯಾರಿಗಾಗಿ ಸಮಯ ಕಳೆಯುವುದರಿಂದ ತರಬೇತಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಭಾಗವಹಿಸುವುದಿಲ್ಲ. ಆದ್ದರಿಂದ ತರಬೇತಿ ನಿರತ ಪಿಎಸ್​ಐಗಳು ಯಾವುದೇ ಸರ್ಕಾರಿ ಹುದ್ದೆ ಅಥವಾ ಇತರ ಪರೀಕ್ಷೆಗಳಿಗೆ ಹಾಜರಾಗಲು ಅನುಮತಿ ನೀಡದಂತೆ ಆದೇಶ ಹೊರಡಿಸಲು ಡಿಜಿ-ಐಜಿಪಿ ಪ್ರವೀಣ್ ಸೂದ್​ಗೆ ಮನವಿ ಮಾಡಿದ್ದಾರೆ. ಈ ಪತ್ರ ಜಾಲತಾಣದಲ್ಲಿ ವೈರಲ್ ಆಗಿದ್ದು, ತರಬೇತಿ ನಿರತ ಪಿಎಸ್​ಐ ಮತ್ತು ಪೊಲೀಸ್ ನೌಕರಿ ಆಕಾಂಕ್ಷಿಗಳಲ್ಲಿ ಅಸಮಧಾನ ವ್ಯಕ್ತವಾಗಿದೆ. ಅಲ್ಲದೆ, ಇದಕ್ಕೆ ಗೃಹ ಮತ್ತು ಪೊಲೀಸ್ ಇಲಾಖೆ ಒಪ್ಪಿಕೊಳ್ಳಬಾರದು ಎಂದು ಬಹಿರಂಗ ಪತ್ರದ ಮೂಲಕ ಮನವಿ ಮಾಡಿದ್ದಾರೆ.

ಪಿಎಸ್​ಐಗಳ ಬಹಿರಂಗ ಪತ್ರ: ಯಾವುದೇ ವ್ಯಕ್ತಿಗೆ ಅವನ ಸಾಮರ್ಥ್ಯಕ್ಕೆ ಅನುಗುಣವಾಗಿ ಉನ್ನತ ಹುದ್ದೆಗೆ ಹೋಗಲು ಪರೀಕ್ಷೆ ಬರೆಯುವುದು ತಪ್ಪೇ ? ಅದು ಪ್ರತಿಯೊಬ್ಬರ ಮೂಲಭೂತ ಹಕ್ಕು. ಪರೀಕ್ಷೆಗೆ ತಯಾರಿ ನಡೆಸುವುದು ಅವರವರ ವೈಯಕ್ತಿಕ ಸಮಯದಲ್ಲಿ. ತರಬೇತಿಗೆ ಏನಾದರು ಸಮಸ್ಯೆ ಆಗಿದೆಯೇ? ಪ್ರತಿಭೆ ಇರುವ ವ್ಯಕ್ತಿ ಯುಪಿಎಸ್​ಸಿ, ಕೆಪಿಎಸ್​ಸಿ ಪರೀಕ್ಷೆ ಬರೆಯದೇ ಕೇವಲ ಸಬ್ ಇನ್​ಸ್ಪೆಕ್ಟರ್ ಆಗಿಯೇ ಇರಬೇಕೆ? ಯಾರಿಗೆ ಗೊತ್ತು ಅದೇ ವ್ಯಕ್ತಿ ಐಎಎಸ್ ಆಗಬಹುದು. ಯಾವುದೇ ವ್ಯಕ್ತಿ ಪರೀಕ್ಷೆ ಬರೆಯದಂತೆ ತಡೆಯುವ ಅಧಿಕಾರ ಯಾರಿಗೂ ಇಲ್ಲ. ಈ ಅಧಿಕಾರ ತರಬೇತಿಗೆ ತೊಡಕಾಗುತ್ತಿದೆ ಎಂಬ ಕುಂಟು ನೆಪ ಇಟ್ಟುಕೊಂಡು ಪರೀಕ್ಷೆ ಬರೆಯದಂತೆ ತಡೆಯಲು ಪ್ರಯತ್ನಿಸುತ್ತಿದ್ದಾರೆ. ಇದು ಈ ಅಧಿಕಾರಿಯ ಸಣ್ಣತನವಲ್ಲವೇ? ಯಾರೇ ಆಗಲಿ ವರ್ಷಾನುಗಟ್ಟಲೆ ಕೂತು ಐಎಎಸ್ ಅಂತಹ ಪರೀಕ್ಷೆಗೆ ತಯಾರಿ ನಡೆಸಿರುತ್ತಾರೆ. ತರಬೇತಿಯಲ್ಲಿ ಇರುವ ಸಮಯದಲ್ಲೇ ಪರೀಕ್ಷೆ ಬಂದರೆ ಆಗ ಏನು ಮಾಡಬೇಕು? ಮುಂದಿನ ವರ್ಷ ಬರೀಬೇಕೆ? ಇಷ್ಟು ವರ್ಷ ಕಷ್ಟಪಟ್ಟು ಓದಿದ್ದು ವ್ಯರ್ಥವಲ್ಲವೇ? ಅವನ ವೈಯಕ್ತಿಕ ಹಕ್ಕನ್ನು ಕಿತ್ತುಕೊಂಡಂತೆ ಅಲ್ಲವೇ? ಎಂದು ತರಬೇತಿ ನಿರತ ಸಬ್​ಇನ್​ಸ್ಪೆಕ್ಟರ್ ಮತ್ತು ಪೊಲೀಸ್ ನೌಕರಿ ಆಕಾಂಕ್ಷಿಗಳು ಬಹಿರಂಗ ಪತ್ರ ಬರೆದು ಪ್ರಶ್ನೆ ಮಾಡಿದ್ದಾರೆ.

ಸಾರ್ವಜನಿಕ ವಲಯದಲ್ಲೂ ಕಿಡಿ

ಯುವಕ, ಯುವತಿಯರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ಉನ್ನತ ಹುದ್ದೆಗೆ ಏರಬೇಕೆಂಬ ಗುರಿ ಹೊಂದಿರುತ್ತಾರೆ. ಈ ಹಿಂದೆಯೂ ಹಲವಾರು ಉದ್ಯೋಗ ಆಕಾಂಕ್ಷಿಗಳು ಸಾಮಾನ್ಯ ನೌಕರಿಯಿಂದ ಯುಪಿಎಸ್​ಸಿ, ಕೆಪಿಎಸ್​ಸಿ ಪರೀಕ್ಷೆ ಬರೆದು ಉತ್ತೀರ್ಣರಾಗಿ ಐಪಿಎಸ್, ಐಎಎಸ್, ಐಎಫ್​ಎಸ್ ಹುದ್ದೆ ಗಿಟ್ಟಿಸಿಕೊಂಡಿದ್ದಾರೆ. ಆದರೆ, ಐಪಿಎಸ್ ಅಧಿಕಾರಿ ವಿಫುಲ್ ಕುಮಾರ್ ನಡೆಯಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ತನ್ನೀರು ಹಾಕಿದಂತಾಗಿದೆ ಎಂದು ಸಾರ್ವಜನಿಕ ವಲಯದಲ್ಲೂ ವಿರೋಧ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net