ಹಿರಿಯರ ಮಾರ್ಗದರ್ಶನದಲ್ಲಿ ಬಿಡಿಸಿಸಿ ಬ್ಯಾಂಕ್ ಅಭಿವೃದ್ಧಿ - ರಮೇಶ ಕತ್ತಿ

ramesh katti
Published on

ಹುಕ್ಕೇರಿ: ಸಹಕಾರಿ ಕ್ಷೇತ್ರದ ಮುಕುಟಪ್ರಾಯವಾದ ಬಿಡಿಸಿಸಿ ಬ್ಯಾಂಕ್ ಶತಮಾನೋತ್ಸವದ ಸಂಭ್ರಮದಲ್ಲಿದ್ದು, ಕೇವಲ 17 ತಿಂಗಳಲ್ಲಿ ಆಧುನಿಕ ತಂತ್ರಜ್ಞಾನ ಸಹಿತ ಸುಸಜ್ಜಿತ ಶತಮಾನೋತ್ಸವ ಭವನ ನಿರ್ಮಿಸಲಾಗಿದೆ ಎಂದು ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಹೇಳಿದ್ದಾರೆ.

ಆಡಳಿತ ಮಂಡಳಿ ಚುನಾವಣೆ ಘೋಷಣೆಯಾಗಿದ್ದರಿಂದ ಭರ್ಜರಿಯಾಗಿ ಉದ್ಘಾಟನೆ ಸಮಾರಂಭ ಆಯೋಜಿಸುವ ಚಿಂತನೆಗೆ ಬ್ರೇಕ್ ಬಿದ್ದಿತ್ತು. ಆದರೆ ಕರೊನಾ ರೋಗದಿಂದ ಮುಂದೂಡಲ್ಪಟ್ಟ ಚುನಾವಣೆ ನ್ಯಾಯಾಂಗದ ಮಧ್ಯ ಪ್ರವೇಶದಿಂದ ಮರಳಿ ಆಡಳಿತ ಮಂಡಳಿ ವಶಕ್ಕೆ ಬಂದ ಬಳಿಕ ನೂತನ ಕಟ್ಟಡವನ್ನು ಶ್ರೀಗಳ ಸಮ್ಮುಖದಲ್ಲಿ ಲೋಕಾರ್ಪಣೆಗೊಳಿಸಲಾಗಿದೆ ಎಂದರು.

95-96ರಲ್ಲಿ ನೌಕರರಿಗೆ ವೇತನ ಪಾವತಿಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿ ಮುಚ್ಚುವ ಭೀತಿಯಲ್ಲಿದ್ದ ಬ್ಯಾಂಕ್‌ನ ಚುಕ್ಕಾಣಿಯನ್ನು ಜಿಲ್ಲೆಯ ಹಿರಿಯರು ನನಗೆ ನೀಡಿದ್ದರು. 38 ವರ್ಷಗಳ ಸುದೀರ್ಘ ಬ್ಯಾಂಕ್ ಸೇವೆಯಲ್ಲಿ 13 ವರ್ಷ ನಿರ್ದೇಶಕನಾಗಿ, 5 ವರ್ಷ ಉಪಾಧ್ಯಕ್ಷನಾಗಿ ಮತ್ತು 20 ವರ್ಷ ಅಧ್ಯಕ್ಷನಾಗಿ ಕರ್ತವ್ಯ ನಿರ್ವಹಿಸುವ ಮೂಲಕ ರಾಜ್ಯ ಮತ್ತು ದೇಶದಲ್ಲಿ ಅತ್ಯಂತ ವಿಶ್ವಾಸಾರ್ಹ ಸಹಕಾರಿ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗುವಂತೆ ಶ್ರಮಿಸಿದ ಸಮಾಧಾನ ತಮಗಿದೆ ಎಂದು ರಮೇಶ ಕತ್ತಿ ಹೇಳಿದ್ದಾರೆ.

ಯುಪಿಎಸ್ಸಿ ಮತ್ತು ಕೆಪಿಎಸ್ಸಿ ಸ್ಪರ್ಧಾತ್ಮಕ ಪರೀಕ್ಷೆಗಾಗಿ ಉನ್ನತ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗಾಗಿ ಪ್ರತಿ ವರ್ಷ ಅಂದಾಜು 50 ಲಕ್ಷ ರೂ. ಮೀಸಲಿಡಲಾಗುವುದು. ಬ್ಯಾಂಕ್ ಕಟ್ಟಡದಲ್ಲಿ ಪರೀಕ್ಷಾರ್ಥಿಗಳಿಗೆ ಉನ್ನತ ತರಬೇತಿ ನೀಡುವ ಮೂಲಕ ಪ್ರತಿ ವರ್ಷ ಜಿಲ್ಲೆಯ 2 ರಿಂದ 3 ಜನ ಆಯ್ಕೆಯಾಗುವಂತೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಪ್ರಸ್ತುತ ಬ್ಯಾಂಕ್ ಆರ್ಥಿಕ ವ್ಯವಹಾರ 5341 ಕೋಟಿ ರೂ. ಇದ್ದು, 2026-27ರ ವರೆಗೆ 10 ಸಾವಿರ ಕೋಟಿ ರೂ.ದುಡಿಯುವ ಬಂಡವಾಳ ಹೊಂದುವಂತೆ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಬಿಡಿಸಿಸಿ ಬ್ಯಾಂಕ್ ಸಿಬ್ಬಂದಿಗೆ ಶೇ.25ರಿಂದ 30 ವೇತನ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ರಮೇಶ ಕತ್ತಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net