ಕಿಷ್ಕಿಂಧಾ ಜಿಲ್ಲೆ ರಚನೆ ಬಗ್ಗೆ ಜನರ ಜತೆ ಚರ್ಚಿಸಿ ತೀರ್ಮಾನಿಸುವುದು ಉತ್ತಮ

KNK SABE
ಕನಕಗಿರಿ ಪಟ್ಟಣದ ಸುವರ್ಣಗಿರಿ ಸಂಸ್ಥಾನ ಮಠದಲ್ಲಿ ಕಿಷ್ಕಿಂಧಾ ಜಿಲ್ಲೆ ಹೋರಾಟ ಸಮಿತಿ ಸಭೆಯಲ್ಲಿ ಹೋರಾಟಗಾರ ದುರ್ಗಾದಾಸ ಯಾದವ್ ಮಾತನಾಡಿದರು. ಪ್ರಮುಖರಾದ ಪ್ರಶಾಂತ ಪ್ರಭುಶೆಟ್ಟರ್, ಬಿ.ವಿ.ಜೋಶಿ, ಕೆ.ಎಚ್.ಕುಲಕರ್ಣಿ, ಎಂ.ಜೆ.ಶ್ರೀನಿವಾಸ, ಯೋಗಿಶ ಮೂತಾ, ದೀಪಕ್ ಭಾಂಟಿಯಾ, ಎಚ್.ಎಂ.ಮಂಜುನಾಥ ಇತರರಿದ್ದರು.
Published on

ಕನಕಗಿರಿ: ಕಿಷ್ಕಿಂಧಾ ಜಿಲ್ಲೆ ರಚನೆಗೆ ಬೆಂಬಲಿಸುವುದರ ಕುರಿತು ತಾಲೂಕಿನ ಜನರೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವುದು ಉತ್ತಮ ಎಂದು ಹಿರಿಯ ಹೋರಾಟಗಾರ ದುರ್ಗಾದಾಸ ಯಾದವ್ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಸುವರ್ಣಗಿರಿ ಸಂಸ್ಥಾನ ವಿರಕ್ತಮಠದಲ್ಲಿ ನೂತನ ಕಿಷ್ಕಿಂಧಾ(ಗಂಗಾವತಿ) ಜಿಲ್ಲಾ ರಚನೆ ಕುರಿತು ಹೋರಾಟ ಸಮಿತಿ ಮಂಗಳವಾರ ಹಮ್ಮಿಕೊಂಡಿದ್ದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.

ಗಂಗಾವತಿ, ಕಾರಟಗಿ, ಕಂಪ್ಲಿ, ಕನಕಗಿರಿ ಸಹಿತ ಕಿಷ್ಕಿಂಧಾ ಜಿಲ್ಲಾ ಕೇಂದ್ರವಾಗಬೇಕೆನ್ನುವ ವಿಚಾರ ಸ್ವಾಗತಾರ್ಹ. ನೂತನ ಜಿಲ್ಲೆಯಾಗುವುದರಿಂದ ಆಡಳಿತ ವ್ಯವಸ್ಥೆ ಹತ್ತಿರವಾಗಿ ಸರ್ಕಾರಿ ಸೌಲಭ್ಯಗಳು ದೊರೆಯಲಿವೆ. ಇದರಲ್ಲಿ ಕನಕಗಿರಿ ತಾಲೂಕು ಹೊರತುಪಡಿಸಿ ಉಳಿದೆಲ್ಲ ತಾಲೂಕುಗಳು ನೀರಾವರಿಯಿಂದ ಕೂಡಿದೆ. ಈ ನಿಟ್ಟಿನಲ್ಲಿ ಇತ್ತೀಚೆಗೆ ತಾಲೂಕು ಆಗಿರುವ ಕನಕಗಿರಿ ಬಗ್ಗೆ ಸಾಧಕ-ಬಾಧಕಗಳ ಕುರಿತು ಜನರ ಅಭಿಪ್ರಾಯ ಸಂಗ್ರಹಿಸುವುದು ಮುಂದಿನ ಬೆಳವಣಿಗೆಗೆ ಸಹಕಾರವಾಗಲಿದೆ ಎಂದರು.

ಸಂಘ-ಸಂಸ್ಥೆಗಳ, ಚಿಂತಕರ ಹಾಗೂ ಹೋರಾಟಗಾರರ ಸಮಾಲೋಚನಾ ಸಭೆಗಳನ್ನು ಹಮ್ಮಿಕೊಂಡು ಒಮ್ಮತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ಗಂಗಾಧರಸ್ವಾಮಿ ಕಲುಬಾಗಿಲಮಠ ಮಾತನಾಡಿ, ಹಲವು ದಶಕಗಳ ಹೋರಾಟದ ಫಲವಾಗಿ ಕನಕಗಿರಿ ತಾಲೂಕಾಗಿದೆ. ಇದೀಗ ಕಿಷ್ಕಿಂಧಾ ಜಿಲ್ಲೆ ಹೋರಾಟಕ್ಕೆ ಹೋರಾಟ ಸಮಿತಿ ಬೆಂಬಲ ಕೇಳಿದೆ. ಈ ಬಗ್ಗೆ ಕೆಲವೇ ದಿನಗಳಲ್ಲಿ ಸಭೆ ನಡೆಸಿ, ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.

ಹೋರಾಟ ಸಮಿತಿಯ ಸದಸ್ಯರಾದ ಪವನಕುಮಾರ ಗುಂಡೂರು ಮಾತನಾಡಿ, ಭತ್ತದ ಕಣಜ ಗಂಗಾವತಿಯನ್ನು ಜಿಲ್ಲಾ ಕೇಂದ್ರವನ್ನಾಗಿಸಿಕೊಂಡು ನೆರೆಯ ಕಂಪ್ಲಿ, ಕನಕಗಿರಿ, ಕಾರಟಗಿ ತಾಲೂಕುಗಳನ್ನು ಹಾಗೂ ಪ್ರಸಕ್ತ ಕುಷ್ಟಗಿ ತಾಲೂಕಿನ ತಾವರಗೇರಾ ಸೇರಿಸಿಕೊಂಡು ಕಿಷ್ಕಿಂಧಾ ಜಿಲ್ಲೆ ಮಾಡುವುದರಿಂದ ಜನರಿಗೆ ಒಳ್ಳೆಯದಾಗಲಿದ್ದು, ಅಭಿವೃದ್ಧಿಗೂ ಸಹಕಾರಿಯಾಗಲಿದೆ ಎಂದರು.

ಡಾ.ಚನ್ನಮಲ್ಲ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಪ್ರಮುಖರಾದ ವೀರೇಶ ಸಮಗಂಡಿ, ಬಿ.ಕನಕಪ್ಪ, ವಾಗೀಶ ಹಿರೇಮಠ, ದೊಡ್ಡಬಸಪ್ಪ ಭತ್ತದ, ಪ್ರಶಾಂತ ಪ್ರಭುಶೆಟ್ಟರ್, ಬಿ.ವಿ ಜೋಶಿ, ಸುರೇಶ ಸಿಂಗನಾಳ, ಎಂ.ಜೆ.ಶ್ರೀನಿವಾಸ, ಯೋಗೇಶಶ ಮೂತಾ, ದೀಪಕ್ ಭಾಂಟಿಯಾ, ಎಚ್.ಎಂ.ಮಂಜುನಾಥ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net