

ತುಮಕೂರು: ಜಿಲ್ಲೆಯಲ್ಲಿ ಬರೋಬ್ಬರಿ 7 ಸ್ಥಾನಗಳಲ್ಲಿ ಗೆದ್ದಿರುವ ಕಾಂಗ್ರೆಸ್ ಭರ್ಜರಿ ಬಹುಮತದೊಂದಿಗೆ ರಾಜ್ಯದಲ್ಲಿಯೂ ಅಧಿಕಾರಕ್ಕೇರಿದೆ.
ಜಿಲ್ಲೆಯಲ್ಲಿ ಗೆದ್ದಿರುವ ಏಳು ಸ್ಥಾನಗಳಲ್ಲಿ ಆರು ಶಾಸಕರು ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗುವ ಕನಸು ಕಾಣುತ್ತಿದ್ದಾರೆ. ಪಾವಗಡ ಕ್ಷೇತ್ರದಿಂದ ಇದೇ ಮೊದಲ ಬಾರಿಗೆ ಶಾಸಕರಾಗಿರುವ ಎಚ್.ವಿ.ವೆಂಕಟೇಶ್ ಮಾತ್ರ ಸಚಿವ ಸ್ಥಾನಕ್ಕೆ ಲಾಬಿ ಮಾಡದವರಾಗಿದ್ದಾರೆ.
ಇನ್ನುಳಿದಂತೆ ಹಿರಿಯ ನಾಯಕ ಡಾ.ಜಿ.ಪರಮೇಶ್ವರ್‌ಗೆ ಮಹತ್ವದ ಸಚಿವ ಸ್ಥಾನ ಫಿಕ್ಸ್, ಶಿರಾ ಶಾಸಕ ಟಿ.ಬಿ.ಜಯಚಂದ್ರ ಕುಂಚಿಟಿಗ ಕೋಟಾದಲ್ಲಿ ಸಚಿವ ಸ್ಥಾನ ಅಥವಾ ವಿಧಾನಸಭಾಧ್ಯಕ್ಷ ಸ್ಥಾನದಲ್ಲಿ ಕೂರುವ ಸಾಧ್ಯತೆಯಿದೆ.
ಚುನಾವಣೆ ಪೂರ್ವದಲ್ಲಿಯೇ ಸಚಿವ ಸ್ಥಾನ ಕೊಟ್ಟರಷ್ಟೇ ನನ್ನ ಸ್ಫರ್ಧೆ ಎಂದು ಸಾಕಷ್ಟು ಸಲ ಹೇಳಿಕೊಂಡಿರುವ ಮಧುಗಿರಿ ಶಾಸಕ ಕೆ.ಎನ್.ರಾಜಣ್ಣ ತಮ್ಮ ನಾಯಕ ಸಿದ್ಧರಾಮಯ್ಯ ಸಿಎಂ ಆದರೆ ಸಚಿವರಾಗುವ ಕನಸಿನಲ್ಲಿದ್ದಾರೆ.
ಹಳೆ ಮೈಸೂರು ಭಾಗದ ಏಕೈಕ ಲಿಂಗಾಯತ ಶಾಸಕ ಎಂಬ ಹೆಗ್ಗಳಿಕೆ ಹೊಂದಿರುವ ತಿಪಟೂರಿನ ಕೆ.ಷಡಕ್ಷರಿ ಕೂಡ ಮೂರನೇ ಬಾರಿಗೆ ವಿಧಾನಸಭೆ ಪ್ರವೇಶಿಸಿರುವವರು. ಪಕ್ಷದಲ್ಲಿಯೂ ಹಿರಿಯರಾಗಿದ್ದು ಸಹಕಾರ ಖಾತೆಯ ಸಚಿವರಾಗುವ ಬಗ್ಗೆ ಪ್ರಚಾರದ ಸಂದರ್ಭದಲ್ಲಿಯೇ ಮಾತನಾಡಿದ್ದಾರೆ.
ಕಾಂಗ್ರೆಸ್‌ಗೆ ಹೊಸಬರಾದರೂ ಸತತ ಐದನೇ ಬಾರಿಗೆ ವಿಧಾನಸಭೆ ಪ್ರವೇಶಿಸಿರುವ ಜಿಲ್ಲೆಯ ಯಶಸ್ವಿ ರಾಜಕಾರಣಿ ಎಂಬ ಹೆಗ್ಗಳಿಕೆ ಪಡೆದಿರುವ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್‌ಗೆ ಹಿರಿತನದ ಆಧಾರದಲ್ಲಿಯೂ ಸಚಿವರಾಗುವ ಅರ್ಹತೆ ಖಂಡಿತ ಇದೆ.
ಡಿ.ಕೆ.ಶಿವಕುಮಾರ್ ಸಿಎಂ ಆದರೆ ನಾನೇ ಆರೋಗ್ಯ ಮಂತ್ರಿ ಎಂದು ಕ್ಷೇತ್ರದೆಲ್ಲೆಡೆ ಹೇಳಿಕೊಂಡಿರುವ ಕುಣಿಗಲ್ ಶಾಸಕ ಡಾ.ಎಚ್.ಡಿ.ರಂಗನಾಥ್ ಕೂಡ ಎರಡನೇ ಸಲ ವಿಧಾನಸಭೆ ಸದಸ್ಯರಾಗಿದ್ದು ಸಚಿವರಾಗಿ ಅವಕಾಶ ಸಿಕ್ಕರೆ ಒಂದು ಕೈನೋಡೋಣ ಎಂದು ಕಾಯುತ್ತಿದ್ದಾರೆ.