

ನರಗುಂದ: ನರಗುಂದ ತಾಲೂಕಿಗೆ ಹಿರಿಯ ದಿವಾಣಿ ನ್ಯಾಯಾಲಯವನ್ನು ಸ್ಥಾಪಿಸಿಕೊಡಬೇಕು. ನ್ಯಾಯವಾದಿಗಳ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಮದ ಸೂಕ್ತ ಅನುದಾನ ಒದಗಿಸುವಂತೆ ಆಗ್ರಹಿಸಿ ತಾಲೂಕು ನ್ಯಾಯವಾದಿಗಳ ಸಂಘದ ಸದಸ್ಯರು ರಾಜ್ಯ ಹೈಕೋರ್ಟ್ ಹಾಗೂ ಗದಗ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ವೇದವ್ಯಾಸಾಚಾರ್ಯ ಶ್ರೀಶಾನಂದ ಅವರಿಗೆ ಪಟ್ಟಣದಲ್ಲಿ ಇತ್ತೀಚೆಗೆ ಮನವಿ ಸಲ್ಲಿಸಲಾಯಿತು.
ನರಗುಂದ ತಾಲೂಕು ಅತ್ಯಂತ ಹಿಂದುಳಿದ ಮತ್ತು ಬರಗಾಲಪೀಡಿತ ಪ್ರದೇಶವಾಗಿದೆ. ಇಲ್ಲಿನ ಕಕ್ಷಿದಾರರು ಆರ್ಥಿಕವಾಗಿ ದುರ್ಬಲರಾಗಿದ್ದಾರೆ. ಅಪಘಾತ, ವಿವಾಹ ವಿಚ್ಛೇದನ, ಮಧ್ಯಂತರ ಅರ್ಜಿ ಪ್ರಕರಣಗಳು, ಕಿರಿಯ ನ್ಯಾಯಾಲಯದ ಆದೇಶ ಮೇಲ್ಮನವಿ, ಭೂ ಸ್ವಾಧಿನ ಸೇರಿ ಅನೇಕ ಪ್ರಕರಣಗಳನ್ನು ನಡೆಸಲು ಗದಗ ಜಿಲ್ಲಾ ನ್ಯಾಯಾಲಯಕ್ಕೆ ಹೋಗುವಂತಹ ಪರಿಸ್ಥಿತಿ ಇದೆ. ಆದರೆ, ನರಗುಂದ ಪಟ್ಟಣದಿಂದ 70 ಕಿಲೋ ಮೀಟರ್ ದೂರದಲ್ಲಿರುವ ಗದಗ ಜಿಲ್ಲಾ ಕೇಂದ್ರಕ್ಕೆ ತೆರಳಲು ಪಕ್ಷಗಾರರು, ನ್ಯಾಯವಾದಿಗಳಿಗೆ ಸರಿಯಾದ ಸಮಯಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ. ಗ್ರಾಮೀಣ ಪ್ರದೇಶದವರಿಗೆ ಸರಿಯಾದ ವಾಹನಗಳ ಸೌಕರ್ಯವಿಲ್ಲದೆ ನ್ಯಾಯದಾನದಿಂದ ಜನತೆ ವಂಚಿತರಾಗುತ್ತಿದ್ದಾರೆ. ಹೀಗಾಗಿ ಎಲ್ಲರ ಹಿತದೃಷ್ಟಿಯಿಂದ ನರಗುಂದ ಪಟ್ಟಣದಲ್ಲಿ ಹಿರಿಯ ದಿವಾಣಿ ನ್ಯಾಯಾಧೀಶರ ನ್ಯಾಯಾಲಯವನ್ನು ಸ್ಥಾಪಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಅಲ್ಲದೆ ನ್ಯಾಯವಾದಿಗಳ ಸಂಘಕ್ಕೆ ಅತ್ಯಗತ್ಯವಾಗಿ ಬೇಕಾಗಿರುವ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಸ್ಥಳ ಗುರುತಿಸಿ, ನೀಲಿನಕ್ಷೆ ತಯಾರಿಸಿ ಸಂಬಂಧಿಸಿದ ಪ್ರಾಧಿಕಾರ, ಕರ್ನಾಟಕ ಉಚ್ಛ ನ್ಯಾಯಾಲಯದಿಂದ ಈಗಾಗಲೇ ಅನುಮೋದನೆ ಪಡೆಯಲಾಗಿದೆ. ರಾಜ್ಯ ಸರ್ಕಾರದ ಸಂಬಂಧಪಟ್ಟ ಇಲಾಖೆಯಿಂದ ನ್ಯಾಯವಾದಿಗಳ ಸಂಘಕ್ಕೆ ಕಟ್ಟಡ ಮಂಜೂರಾಗಿದೆ. ಇಲ್ಲಿನ ನ್ಯಾಯವಾದಿಗಳ ಸಂಘದ ಕಟ್ಟಡ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಂಘದ ಸದಸ್ಯರು ನ್ಯಾಯಮೂರ್ತಿಗಳಿಗೆ ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ನ್ಯಾಯಮೂರ್ತಿ ವೇದವ್ಯಾಸಾಚಾರ್ಯ ಶ್ರೀಶಾನಂದ ಅವರು, ತಾಲೂಕು ವಕೀಲರ ಸಂಘದ ಬೇಡಿಕೆಗೆ ಅನುಸಾರ ನರಗುಂದಕ್ಕೆ ಹಿರಿಯ ಶ್ರೇಣಿಯ ನ್ಯಾಯಾಲಯ ಒದಗಿಸಲು ಎಲ್ಲ ರೀತಿಯ ನಿರ್ಧಾರ ಕೈಗೊಳ್ಳುವುದರ ಜತೆಗೆ ನ್ಯಾಯವಾದಿಗಳ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೆ ಶ್ರಮಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಸತ್ರ ನ್ಯಾಯಾದೀಶೆ ನಾಗವೇಣಿ, ನರಗುಂದ ಜೆಎಂಎಫ್‌ಸಿ ನ್ಯಾಯಾಲಯದ ದಿವಾಣಿ ನ್ಯಾಯಾಧೀಶ ಜೀನಪ್ಪ ಚೌಗಲಾ, ನ್ಯಾಯವಾಧಿಗಳ ಸಂಘದ ಅಧ್ಯಕ್ಷ ವಿ.ಎಸ್. ದೇಶಪಾಂಡೆ, ಉಪಾಧ್ಯಕ್ಷ ಜಿ.ಎಚ್. ಕಗದಾಳ, ಸಿ.ಎಸ್. ಪಾಟೀಲ, ಪಿ.ಎಸ್. ಹುಂಬಿ, ಎಫ್.ವೈ. ದೊಡಮನಿ, ಆರ್.ಸಿ. ಪಾಟೀಲ, ಎ.ವಿ. ಭೋಸಲೆ, ಆರ್.ಆರ್. ನಾಯ್ಕರ್, ಕೆ.ಎಸ್. ಹೂಲಿ, ಎಂ.ಬಿ. ಕುಲಕರ್ಣಿ, ಎಸ್.ಎಸ್. ಆದೆಪ್ಪನವರ, ಜೆ.ಸಿ. ಬೋಗಾರ, ಎಂ.ಎಚ್. ತಹಸೀಲ್ದಾರ ಎನ್.ವಿ. ಮೇಟಿ, ವಿಠಲ ಗಾಯಕವಾಡ, ಆರ್.ಟಿ. ಪಾಟೀಲ, ಎಸ್.ಎಂ. ಗುಗ್ಗರಿ, ಇತರರು ಉಪಸ್ಥಿತರಿದ್ದರು.