ಬೇರೆ ಇಲಾಖೆಯಡಿ ಹಿರಿಯ ನಾಗರಿಕರ ದಿನಾಚರಣೆ ವಿಲೀನ,  ಸಚಿವೆ ಹೆಬ್ಬಾಳಕರ ವಿರುದ್ಧ ಸಂಘದ ಆಕ್ರೋಶ

Published on

ಹುಬ್ಬಳ್ಳಿ: ವಿಶ್ವ ಹಿರಿಯ ನಾಗರಿಕರ ದಿನವನ್ನು ಅನ್ಯ ಇಲಾಖೆಯ ಕಾರ್ಯಕ್ರಮಗಳೊಂದಿಗೆ ಸೇರಿಸಿ ಆಚರಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಅಧಿಕಾರಿಗಳಿಗೆ ಸೂಚಿಸಿರುವುದು ಸರಿಯಾದ ಕ್ರಮವಲ್ಲ ಎಂದು ಕರ್ನಾಟಕ ರಾಜ್ಯ ಹಿರಿಯ ನಾಗರಿಕರು ಹಾಗೂ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘ ಆಕ್ರೋಶ ವ್ಯಕ್ತಪಡಿಸಿದೆ.

ಪ್ರತಿ ವರ್ಷ ಅಕ್ಟೋಬರ್ 1ರಂದು ವಿಶ್ವ ಹಿರಿಯ ನಾಗರಿಕರ ದಿನವನ್ನು ಆಚರಿಸುತ್ತ ಬರಲಾಗಿದೆ. ಬೆಂಗಳೂರಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಇಲಾಖೆಯ ಸಚಿವರು, ಶಾಸಕರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಕೂಡಿ ರಾಜ್ಯ ಮಟ್ಟದ ಹಿರಿಯ ನಾಗರಿಕರ ಸಂಘ ಸಂಸ್ಥೆಗಳು ಸಾಧನೆಗೈದ ಹಿರಿಯರು, ಕ್ರೀಡಾ ಪಟುಗಳಿಗೆ ಸನ್ಮಾನ ಮುಂತಾದ ಕಾರ್ಯಕ್ರಮವನ್ನು ಮುಂಜಾನೆಯಿಂದ ಸಾಯಂಕಾಲದವರೆಗೆ ಜರುಗಿಸುತ್ತ ಬರಲಾಗಿದೆ.

ಆದರೆ, ಈ ವರ್ಷ ಅಕ್ಟೋಬರ್ 1ರಂದು ದಸರಾ ಪ್ರಯುಕ್ತ ಕಾರ್ಯಕ್ರಮವನ್ನು ಒಂದು ವಾರ ಮುಂದೂಡಲಾಯಿತು. ತಿಂಗಳು ಮುಗಿದರೂ ಆಚರಣೆ ಮಾಡದ ಕಾರಣ ಇದೀಗ ಸಂಘದ ಒತ್ತಾಯದ ಮೇರೆಗೆ ಹಿರಿಯ ನಾಗರಿಕರ ಇಲಾಖೆ ಸಚಿವೆ ಹೆಬ್ಬಾಳಕರ ಅವರು ನವೆಂಬರ್ 19ಕ್ಕೆ ನಿಗದಿ ಮಾಡಿ ಈ ಕಾರ್ಯಕ್ರಮವನ್ನು ಮಹಿಳಾ ಮಕ್ಕಳ ಕಾರ್ಯಕ್ರಮದಲ್ಲಿ ಸಂಯೋಜನೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಇದರಿಂದ ಹಿರಿಯ ನಾಗರಿಕರ ಅಸ್ತಿತ್ವ ಮತ್ತು ಹಿರಿಯ ನಾಗರಿಕರ ಕಾನೂನು ರಕ್ಷಣೆಗೆ ಅವಮಾನವಾಗುತ್ತಿದೆ. ಈ ರೀತಿ ರಾಜ್ಯದ 82 ಲಕ್ಷ ಹಿರಿಯ ನಾಗರಿಕರಿಗೆ ಎಲ್ಲ ಸೌಲಭ್ಯ ನೀಡಬೇಕಾದ ಸಚಿವರು ಹಿರಿಯ ನಾಗರಿಕರನ್ನು ನಿರ್ಲಕ್ಷ್ಯ ಮಾಡುತ್ತಿರುವದನ್ನು ಸಂಘವು ವಿರೋಧಿಸುತ್ತದೆ ಎಂದು ಸಂಘದ ಅಧ್ಯಕ್ಷ ಬಿ.ಎ. ಪಾಟೀಲ ತಿಳಿಸಿದ್ದಾರೆ.

ಆದಾಗ್ಯೂ ಈ ಕಾರ್ಯಕ್ರಮವನ್ನು ಮುಂದುವರಿಸಿದಲ್ಲಿ ಅಂದು ಸಂಘದ ಪರವಾಗಿ ರಾಜ್ಯಾದ್ಯಂತ ಹಿರಿಯ ನಾಗರಿಕರು ಪ್ರತಿಭಟನೆಗೆ ಮುಂದಾಗಲು ಸದಸ್ಯರ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net