

ಹುಬ್ಬಳ್ಳಿ: ಹಿರಿಯ ನಾಗರಿಕರ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಯುವುದು ಹಾಗೂ ಸರ್ಕಾರ ವಿವಿಧ ಸೌಲಭ್ಯಗಳನ್ನು ಜಾರಿಗೆ ತರಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಹಿರಿಯ ನಾಗರಿಕರು ಹಾಗೂ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಜೂನ್ 16ರಂದು ರಾಜ್ಯದ ಎಲ್ಲ ಜಿಲ್ಲಾಧಿಕಾರಿ, ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಬಿ.ಎ. ಪಾಟೀಲ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10.30ಕ್ಕೆ ಹುಬ್ಬಳ್ಳಿ ತಹಸೀಲ್ದಾರ್ ಕಚೇರಿ, ಧಾರವಾಡ ಡಿಸಿ ಆಫೀಸ್ ಎದುರು ಧರಣಿ ಸತ್ಯಾಗ್ರಹ ನಡೆಸಿ ನಂತರ ಸರ್ಕಾರಕ್ಕೆ ವಿವಿಧ ಬೇಡಿಕೆಗಳ ಮನವಿ ಸಲ್ಲಿಸಲಾಗುವುದು ಎಂದರು.
ವಿಶ್ವ ಸಂಸ್ಥೆಯು ಪ್ರತಿ ವರ್ಷ ಜೂನ್ 15ನ್ನು ಹಿರಿಯ ನಾಗರಿಕರ ದೌರ್ಜನ್ಯ ತಡೆ ದಿನವಾಗಿ ಆಚರಿಸುತ್ತದೆ. ಅದರಂತೆ ದೇಶದಲ್ಲಿಯೂ ಈ ದಿನವನ್ನು ಆಚರಣೆ ಮಾಡಿ ಮಾರನೇ ದಿನ ನಮ್ಮ ಹಕ್ಕುಗಳಿಗಾಗಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದರು.
ಹಿರಿಯ ನಾಗರಿಕರ ಸಾಮಾಜಿಕ ಭದ್ರತೆ, ಸಾಮಾಜಿಕ ನ್ಯಾಯ, ರಕ್ಷಣೆ ಮಾಡುವುದು ಸರ್ಕಾರದ ಕರ್ತವ್ಯವಾಗಿದೆ. ಈ ಬಗ್ಗೆ 2007ರಲ್ಲಿ ಹಿರಿಯ ನಾಗರಿಕರ ಕಾನೂನು ರಚಿಸಿ ಹಿರಿಯರಿಗೆ ಹಲವು ಸೌಲಭ್ಯಗಳನ್ನು ನೀಡಲಾಗಿದೆ. ಇದರ ಮಹತ್ವದ ಅಂಶಗಳನ್ನು ಸರ್ಕಾರ ಅನುಷ್ಠಾನಗೊಳಿಸಿಲ್ಲ. ಈ ಕುರಿತು ನಾಗರಿಕರಲ್ಲಿ ಜಾಗೃತಿ ಮೂಡಿಸಲಾಗುತ್ತದೆ ಎಂದರು.
ಎಲ್ಲ ಹಿರಿಯ ನಾಗರಿಕರನ್ನು ರಾಷ್ಟ್ರದ ಸಂಪತ್ತು ಎಂದು ಘೋಷಣೆ ಮಾಡಬೇಕು. ಆರ್ಥಿಕ ದುರ್ಬಲ ಎಲ್ಲ ಹಿರಿಯರಿಗೆ ಮಾಸಿಕ 10 ಸಾವಿರ ರೂ. ವೃದ್ಧಾಪ್ಯ ವೇತನ ನೀಡಬೇಕು. ಹಿರಿಯ ನಾರಿಕರಿಗಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸಿ ಮಂತ್ರಿಯನ್ನು ನೇಮಿಸಬೇಕು ಎಂಬುದು ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಗುವುದು ಎಂದು ಹೇಳಿದರು.
ಉಪಾಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಡಾ. ಸುನಂದಾ ಬೆನ್ನೂರ, ಎಸ್.ಎಂ. ಕೋಳೂರ, ಡಿ.ಟಿ. ಪಾಟೀಲ ಇತರರು ಗೋಷ್ಠಿಯಲ್ಲಿದ್ದರು.