

ಕೊಪ್ಪಳ: ಹಿರಿಯರು ಕಿರಿಯರನ್ನು ತಿದ್ದಿ ತೀಡಿ ಸಂಸ್ಕಾರ ಕಲಿಸಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ ಎಸ್.ದರಗದ ಹೇಳಿದರು.
ನಗರದ ತಾಲೂಕು ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ವಿಕಲಚೇತ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಸೋಮವಾರ ಹಮ್ಮಿಕೊಂಡಿದ್ದ ಹಿರಿಯ ನಾಗರಿಕರ ಕ್ರೀಡಾಕೂಟ ಮತ್ತು ಸಾಂಸತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಹಳೇ ಬೇರು ಹೊಸ ಚಿಗುರಿನೊಂದಿಗೆ ದೇಶದ ಅಭ್ಯುದಯವಾಗಬೇಕು. ಕಿರಿಯರು ಹಿರಿಯರ ಮಾರ್ಗದರ್ಶನದಲ್ಲಿ ನಡೆಯಬೇಕು. ಇಂದು ತಂದೆ&ತಾಯಿ, ಹಿರಿಯನ್ನು ಹಿಯಾಳಿಸುವ ಸ್ಥಿತಿ ನಿರ್ಮಾಣವಾಗಿದೆ. ಮನೆಯಲ್ಲಿ ಹಿರಿಯರು ಇರಲೇಬಾರದು ಎಂಬ ಮನೋಭಾವ ಕಾಣುತ್ತಿದೆ. ವಿದ್ಯೆ ಇದ್ದರೂ ಇಂದಿನ ಮಕ್ಕಳಲ್ಲಿ ವಿನಯತೆ ಇಲ್ಲ. ವಿದ್ಯೆಯೊಂದಿಗೆ ವಿನಯ ಅವಶ್ಯ. ಹಿರಿಯರಿಂದ ವಿನಯ ಕಲಿಯಲು ಸಾಧ್ಯ. ಹಿರಿಯರು ಕ್ರೀಡೆಯಲ್ಲಿ ಭಾಗವಹಿಸಿ. ಸೋಲು&ಗೆಲುವು ಸಾಮಾನ್ಯ ಎಂದರು.
ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ವೆಂಕಟೇಶ ದೇಶಪಾಂಡೆ ಮಾತನಾಡಿ, ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಹಿರಿಯ ನಾಗರಿಕರಿಗೆ ಕ್ರೀಡೆ ಹಾಗೂ ಸಾಂಸತಿಕ ಸ್ಪರ್ಧೆ ಹಮ್ಮಿಕೊಂಡಿದ್ದೇವೆ. ನಡಿಗೆ, ಬಕೆಟ್ನಲ್ಲಿ ಬಾಲ್ ಎಸೆಯುವುದು, ಮ್ಯೂಸಿಕಲ್ ಚೆರ್ ಹಾಗೂ ಏಕ ಪಾತ್ರಾಭಿನಯ, ಗಾಯನ ಸ್ಪರ್ಧೆ ಇರಲಿದೆ. ವಿಜೇತರಿಗೆ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದೆಂದರು.
ನಿವೃತ್ತ ನೌಕರರ ಸಂದ ಪ್ರಧಾನ ಕಾರ್ಯದರ್ಶಿ ಬೀರ ನಾಯಕರ್, ಉಪಾಧ್ಯೆ ಇಂದುಮತಿ, ಪ್ರಮುಖರಾದ ಅಶೋಕ ಪಾಟೀಲ, ಬಸವರಾಜ ಸಜ್ಜನ, ಸುಮಂಗಲ ಹಂಚಿನಾಳ, ನಾಗಪ್ಪ ಬಳಗೇರಿ, ಜೆ.ಶರಣಪ್ಪ ಇತರರಿದ್ದರು.